ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಾಡಿನ ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್.ಎಲ್ ಭೈರಪ್ಪ(94) ಬುಧವಾರ ನಿಧನರಾಗಿದ್ದಾರೆ. ರಾಜರಾಜೇಶ್ವರಿನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿನ ನಿವಾಸದಲ್ಲಿ ವಾಸವಾಗಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ 6 ತಿಂಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ ಆಗಸ್ಟ್ 20, 1934ರಲ್ಲಿ ಜನಿಸಿದರು. ಲಿಂಗಣ್ಣಯ್ಯ ಹಾಗೂ ಗೌರಮ್ಮ ಇವರ ತಂದೆ ,ತಾಯಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ತತ್ವಶಾಸ್ತ್ರ ಪದವಿ ಪಡೆದಿದ್ದಾರೆ. ಇವರು ಕಾದಂಬರಿಗಳು ದೇಶದ ವಿವಿಧ ಭಾಷೆಗಳ ಜೊತೆಗೆ ವಿಶ್ವದ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಲೋಕದಲ್ಲಿನ ಕಾದಂಬರಿಕಾರರಲ್ಲಿ ಬಹುಮುಖ್ಯವಾಗಿ ಗುರುತಿಸಿಕೊಳ್ಳುತ್ತಾರೆ.
ಧರ್ಮಶ್ರೀ, ದೂರು ಸರಿದರು, ಮತದಾನ, ಜಲಪಾತ, ನಾಯಿ ನೆರಳು, ವಂಶವೃಕ್ಷ, ಗೃಹಭಂಗ, ನಿರಾಕರಣ, ಗ್ರಹಣ, ದಾಟು, ಪರ್ವ, ಅನ್ವೇಷಣ, ನೆಲೆ, ಸಾಕ್ಷಿ, ತಂತು, ಸಾರ್ಥ, ಅಂಚು, ಮಂದ್ರ, ಆವರಣ, ಕವಲು, ಯಾನ, ಉತ್ತರಕಾಂಡ ಸೇರಿದಂತೆ ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ. ವಂಶವೃಕ್ಷ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, 2005ರಲ್ಲಿ ಪಂಪ ಪ್ರಶಸ್ತಿ, 2010ರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ, 2011ರಲ್ಲಿ ನಾಡೋಜ, 2017ರಲ್ಲಿ ನೃಪತುಂಗ ಪ್ರಶಸ್ತಿ ಸೇರಿ ಅನೇಕ ಗೌರವಗಳು ಇವರ ಮುಡಿಗೇರಿವೆ.