ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ತಬಲ ವಾದಕ ಜಾಕಿರ್ ಹುಸೇನ್(73) ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಅಮೆರಿಕ ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇಡೋಪಥಿಕ್ ಪಲ್ಮನರಿ ಫೈಬ್ರೋಸಿಸ್ ನ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ 2 ವಾರಗಳಿಂದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ಯಾನ್ ಫ್ರಾನ್ಸಿಸ್ಕೊ ಕಾಲಮಾನ ಪ್ರಕಾರ ಮಧ್ಯಾಹ್ನ 4 ಗಂಟೆಗೆ ಮೃತಪಟ್ಟಿದ್ದಾರೆ ಎಂದು ಸಹೋದರಿ ಕುರ್ಷಿದ್ ಅಯುಲಿಯಾ ತಿಳಿಸಿದ್ದಾರೆ.
ಪತ್ನಿ ಆಂಟೊನಿಯಾ ಮಿನೆಕೊಲಾ ಹಾಗೂ ಮಕ್ಕಳಾದ ಅನಿಸಾ ಕುರೇಷಿ, ಇಸ್ಬೆಲ್ಲಾ ಕುರೇಷಿ ಸೇರಿದಂತೆ ಅಪಾರ ಬಂಧು ಗಳಗವನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಮಾರ್ಚ್ 9, 1951ರಲ್ಲಿ ಮುಂಬೈನಲ್ಲಿ ಜನಿಸಿದರು. ಇವರ ತಂದೆ ಉಸ್ತಾದ್ ಅಲ್ಲಾ ರಖಾ ಸಹ ಖ್ಯಾತ ತಬಲ ವಾದಕರು. ಮಗ ಜನಿಸಿದಾಗ ಕಿವಿಯಲ್ಲಿ ಧ ಧನ್ ಧಿನ್ ಧ ಎಂದು ಸಂಗೀತ ಉಚ್ಛರಿಸಿದ್ದರಂತೆ. ಇದು ಪ್ರಾರ್ಥನೆಯಷ್ಟೇ ನನ್ನ ಮಗನಿಗೆ ಪವಿತ್ರ ಎಂದು ಹೇಳಿದ್ದರಂತೆ.
ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಜಾಕಿರ್ ಹುಸೇನ್ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಪ್ರಶಸ್ತಿಯನ್ನು 1988ರಲ್ಲಿ, 2002ರಲ್ಲಿ ಪದ್ಮ ಭೂಷಣ ಹಾಗೂ 2023ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ. 7ನೇ ವಯಸ್ಸಿನಲ್ಲಿಯೇ ಸಂಗೀತ ಕನ್ಸರ್ಟ್, 11ನೇ ವಯಸ್ಸಿಗೆ ಸಂಗೀ ಕಾರ್ಯಕ್ರಮ ನೀಡಿದರು. 1989ರಲ್ಲಿ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟರು. ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸವಾದ ವೈಟ್ ಹೌಸ್ ಗೆ ಆಹ್ವಾನ ಪಡೆದ ಮೊದಲ ಭಾರತೀಯ ಸಂಗೀತಕಾರ ಆಗಿದ್ದಾರೆ.
ಇವರ ನಿಧನಕ್ಕೆ ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜರು, ಅಭಿಮಾನಿಗಳು ಹಾಗೂ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅವರ ಶಿಷ್ಯರು ಸಂತಾಪ ಸೂಚಿಸಿದ್ದಾರೆ.