ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಆರ್ಥಿಕ ನೆರವು ಮಂಜೂರಾಗಿದೆ. ಆದರೆ, ಒಂದು ವರ್ಷ ಕಳೆದರೂ ಗ್ರಾಮ ಪಂಚಾಯ್ತಿಯಿಂದ ಹಣ ಮಾತ್ರ ರೈತನ ಖಾತೆಗೆ ಬರುತ್ತಿಲ್ಲ. ಇದರಿಂದ ಆಕ್ರೋಶಗೊಂಡ ರೈತ ಎಮ್ಮೆಯನ್ನು ತಂದೆ ಗ್ರಾಮ ಪಂಚಾಯ್ತಿಯೊಳಗೆ ಕಟ್ಟಿದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದಿದೆ. ರೈತ ಸತೀಶ ಕೋಳಿ ಈ ರೀತಿಯಾಗಿ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದಾರೆ.
ಸಂಬರಗಿ ಗ್ರಾಮ ಪಂಚಾಯ್ತಿಯಿಂದ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ 50 ಸಾವಿರ ರೂಪಾಯಿ ನೆರವು ಸಿಕ್ಕಿದೆ. ಆದರೆ, ಹಣ ಮಾತ್ರ ಕೊಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಮ್ಮ ಯೋಜನೆ ರದ್ದಾಗಿದೆ ಎಂದು ಹೇಳುತ್ತಿದ್ದಾರೆ ಎಂದು ರೈತ ಸತೀಶ ಆಕ್ರೋಶ ವ್ಯಕ್ತಪಡಿಸಿದರು. ವಿಚಾರ ತಿಳಿದು ಸ್ಥಳಕ್ಕೆ ಬಂದ ತಾಲೂಕು ಪಂಚಾಯ್ತಿ ಇಒ ಶಿವಾನಂದ ಕಲ್ಲಾಪುರ ರೈತನಿಗೆ ಭರವಸೆ ನೀಡಿದ್ದು, ಎಮ್ಮೆಯನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ.