ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಬೆಳೆ ಸಾಲ ಮಾಡಿದ್ದ ರೈತ ಅದನ್ನು ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮುರುಡಿ ಗ್ರಾಮದಲ್ಲಿ ನಡೆದಿದೆ. ರುದ್ರಪ್ಪ ಬಸಪ್ಪ ಜೇವರ್ಗಿ(40) ಮೃತ ರೈತನಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಳೆಗಳಿಗೆ ಸಂಪಡಿಸುವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಮೃತನ ಪುತ್ರ ದೂರು ದಾಖಲಿಸಿದ್ದಾರೆ.
ಘಟನೆ ವಿವರ: ತಾಲೂಕಿನ ಮುರುಡಿ ಗ್ರಾಮದ ರುದ್ರಪ್ಪ ಹಾಗೂ ಅಣ್ಣ ನಿಂಗಪ್ಪ ಕುಟುಂಬಸ್ಥರು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಗ್ರಾಮದ ಸರ್ವೇ ನಂಬರ್ 121/1ರಲ್ಲಿ 5.18 ಎಕರೆ ಜಮೀನಿದೆ. ಸುಂಗಠಾಣದ ಪಿಕೆಪಿಎಸ್ ಬ್ಯಾಂಕ್ ನಲ್ಲಿ 50 ಸಾವಿರ ರೂಪಾಯಿ ಸಾಲವನ್ನು ಈ ಜಮೀನು ಮೇಲೆ ಪಡೆಯಲಾಗಿದೆ. ಇನ್ನೊಂದು 104/4*1ರಲ್ಲಿ 3.21 ಎಕರೆ ಜಮೀನು ಇದೆ. ಸಿದ್ದೇಶ್ವರ ಪತ್ತಿನ ಬ್ಯಾಂಕಿನಲ್ಲಿ 8 ಲಕ್ಷ ರೂಪಾಯಿ ಸಾಲವಿದೆ. ಇವುಗಳನ್ನು ತೀರಿಸಲಾಗದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರಂತೆ.
ಸೆಪ್ಟೆಂಬರ್ 16, ಮಂಗಳವಾರ ಮಧ್ಯಾಹ್ನ ಸುಮಾರು 3.30ರ ಸುಮಾರಿಗೆ ಮನೆಯಲ್ಲಿ ರುದ್ರಪ್ಪ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮನೆಗೆ ಬಂದ ಮಗ ಇದನ್ನು ನೋಡಿ ನೆರೆ ಮನೆಯವರ ಸಹಾಯದಿಂದ ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಸಂಜೆ ಸುಮಾರು 5.25ರ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಸಂಬಂಧ ಸಿಂದಗಿ ಠಾಣೆಯಲ್ಲಿ ದೂರು ದಾಖಲಾಗಿದೆ.