Ad imageAd image

ನಮಗೆ ನ್ಯಾಯ ಸಿಗುವ ತನಕ ಹೋರಾಟ: ಹೆಚ್.ಕೆ ಅಂಗಡಿ

ನಮಗೆ ಯಾವುದೇ ರೀತಿಯ ಜಾಬ್ ಚಾರ್ಟ್ ಇಲ್ಲ. ಮೂಲಭೂತ ಸೌಕರ್ಯವೇ ಇಲ್ಲದೆ ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ.

Nagesh Talawar
ನಮಗೆ ನ್ಯಾಯ ಸಿಗುವ ತನಕ ಹೋರಾಟ: ಹೆಚ್.ಕೆ ಅಂಗಡಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ನಮಗೆ ಯಾವುದೇ ರೀತಿಯ ಜಾಬ್ ಚಾರ್ಟ್ ಇಲ್ಲ. ಮೂಲಭೂತ ಸೌಕರ್ಯವೇ ಇಲ್ಲದೆ ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಗುರುವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. ಪಟ್ಟಣದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಸಿಂದಗಿ ತಾಲೂಕಿನರುವ 19 ಗ್ರಾಮ ಆಡಳಿತಾಧಿಕಾರಿಗಳು, 26 ಗ್ರಾಮ ಸಹಾಯಕರು ಹೋರಾಟವನ್ನು ಪ್ರಾರಂಭಿಸಿದ್ದಾರೆ.

ಈ ವೇಳೆ ಗ್ರಾಮ ಆಡಳಿತಾಧಿಕಾರಿಗಳ ತಾಲೂಕಾಧ್ಯಕ್ಷ ಹೆಚ್.ಕೆ ಅಂಗಡಿ, ನಮಗೆ ಯಾವುದೇ ರೀತಿಯಿಂದ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ. ಸರಿಯಾದ ಕಚೇರಿ ವ್ಯವಸ್ಥೆಯಿಲ್ಲ. ಮೊಬೈಲ್ ಮೂಲಕವೇ ಕೆಲಸ ನಿರ್ವಹಿಸಲು ಹೇಳುತ್ತಾರೆ. 101 ಆ್ಯಪ್ ಗಳಿಂದ ಮೊಬೈಲ್ ಸರಿಯಾಗಿ ಕೆಲಸ ಮಾಡಿದೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗುತ್ತಿದ್ದೇವೆ. ಕೂಡಲೇ ಸರ್ಕಾರ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಗೋಲಗೇರಿ ಗ್ರಾಮ ಆಡಳಿತಾಧಿಕಾರಿ ಬಸಯ್ಯ ಮಠ ಮಾತನಾಡಿ, ನಮಗೆ ಯಾವುದೇ ರೀತಿಯ ಸೀಮಿತವಾದ ಕೆಲಸ ನೀಡುತ್ತಿಲ್ಲ. ಕೃಷಿ, ಪಂಚಾಯ್ತಿ, ಸಾಮಾಜ ಕಲ್ಯಾಣ ಹೀಗೆ ಎಲ್ಲ ಇಲಾಖೆಗಳ ಕೆಲಸಗಳನ್ನು ಸಹ ಪೂರ್ವಾನುಮತಿ ಇಲ್ಲದೆ ಹಾಕಲಾಗುತ್ತಿದೆ. ಹೀಗಾಗಿ ಸಾಕಷ್ಟು ಕೆಲಸದ ಒತ್ತಡದಿಂದಾಗಿ ಅನೇಕ ಗ್ರಾಮ ಆಡಳಿತಾಧಿಕಾರಿಗಳು ಸಾವನ್ನಪ್ಪಿದ್ದಾರೆ. ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಬೆಂಗಳೂರಿನಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬೋರಗಿಯ ಗ್ರಾಮ ಆಡಳಿತಾಧಿಕಾರಿ ವಿನೋದ ಕರನಾಳ ಮಾತನಾಡಿ, ನಮಗೆ ಸರಿಯಾಗಿ ಕಚೇರಿಯಿಲ್ಲ. ಹೀಗಾಗಿ ಹೋಟೆಲ್, ಮನೆಗಳಲ್ಲಿ ಕುಳಿತು ಕೆಲಸ ಮಾಡಿದರೆ ಸಾರ್ವಜನಿಕರು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಲಾಪ್ ಟಾಪ್ ಇಲ್ಲ. ಸ್ವಂತ ಮೊಬೈಲ್ ನಲ್ಲಿ 101 ಆ್ಯಪ್ ಗಳ ಮೂಲಕ ಒತ್ತಡದಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರಯಾಣ ಭತ್ಯೆ 300 ರೂಪಾಯಿ ನೀಡಲಾಗುತ್ತಿದೆ. ಕನಿಷ್ಠ 3 ಸಾವಿರ ರೂಪಾಯಿ ನೀಡುವುದು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ತನಕ ಹೋರಾಟ ಮಾಡಲಾಗುವುದು ಎಂದರು.

ಹೀಗೆ ಸಾಕಷ್ಟು ಸಮಸ್ಯೆಗಳ ನಡುವೆ ಕೆಲಸ ಮಾಡುತ್ತಿದ್ದರೂ ನಮಗೆ ಪದ್ದೋನ್ನತಿ ಇಲ್ಲ. ಸಿ ವೃಂದದ ನೌಕರರಿಗಿಂತ ಹತ್ತುಪಟ್ಟು ಕೆಲಸ ಮಾಡುತ್ತಿದ್ದರೂ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಸಹ ನೀಡುತ್ತಿಲ್ಲ. ಮೂಲಸೌಕರ್ಯಗಳ ಜೊತೆಗೆ ಸೇವಾ ಸೌಲಭ್ಯಕ್ಕೆ ಸಂಬಂಧಿಸಿದ ಹಲವು ಬೇಡಿಕೆಗಳೊಂದಿಗೆ ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಗುತ್ತಿದೆ. ಸಂಜೆ ತಹಶೀಲ್ದಾರ್ ಪ್ರದೀಪಕುಮಾರ್ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ವಿವಿಧ ಗ್ರಾಮಗಳ ಆಡಳಿತಾಧಿಕಾರಿಗಳಾದ ಪಿ.ಕೆ ಹುಡೇದ, ಸಂತೋಷ ಬಿದರಕುಂದಿ, ಎನ್.ಎ ಖಾನಾಪೂರ, ಸುನಿಲ್ ಬಂಡಿವಡ್ಡರ, ಸರಸ್ವತಿ ಮೋರೆ ಸೇರಿದಂತೆ ಅನೇಕರಿದ್ದರು.

WhatsApp Group Join Now
Telegram Group Join Now
Share This Article