ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹಣ ಪಡೆದು ವಾಪಸ್ ಕೊಡೆದೆ ವಂಚನೆ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡದ ಕಿರುತರೆ ನಟಿ ವಿಸ್ಮಯಾಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶಕ್ತಿ ಗಣಪತಿ ನಗರದ ನಿವಾಸಿ ಹಿಮಾನ್ವಿ ಎಂಬುವರು ಕೋರ್ಟ್ ಗೆ ಸಲ್ಲಿಸಿದ ದೂರಿನ ಮೇಲೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. 24ನೇ ಎಸಿಎಂಎಂ ನ್ಯಾಯಾಲಯ ನೀಡಿದ ನಿರ್ದೇಶನದ ಮೇಲೆ ಎಫ್ಐಆರ್ ಆಗಿದೆ.
ಸಾಮಾಜಿಕ ಮಾಧ್ಯಮದ ಮೂಲಕ 2019ರಲ್ಲಿ ವಿಸ್ಮಯಾಗೌಡ ಹಾಗೂ ಹಿಮಾನ್ವಿ ಪರಿಚಯವಾಗಿದೆ. ನಮ್ಮ ಕ್ಲಿನಿಕ್, ಮನೆಗೂ ಭೇಟಿ ಕೊಟ್ಟಿದ್ದರು. ತಾನೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಆರ್ಥಿಕ ಸಮಸ್ಯೆಯಿದ್ದು ಹಣ ನೀಡುವಂತೆ ಕೇಳಿದ್ದರು. ನನ್ನ ಉಳಿತಾಯ ಖಾತೆಯಿಂದ 1.50 ಲಕ್ಷ ಹಾಗೂ ನನ್ನ ತಾಯಿ ಖಾತೆಯಿಂದ 5 ಲಕ್ಷ ರೂಪಾಯಿ ಸೇರಿ 6.50 ಲಕ್ಷ ನೀಡಿದ್ದೇನೆ. ಮುಂದೆ ಹಣ ಕೇಳಿದಾಗ ಕಾರಣಗಳನ್ನು ಹೇಳುತ್ತಾ ಬಂದರು. ಅವರು ನೀಡಿದ ಚೆಕ್ ಬ್ಯಾಂಕ್ ಗೆ ಕೊಟ್ಟಾಗ ಸಹಿ ವ್ಯತ್ಯಾಸವಿದೆ ಎಂದರು. ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ಹಿಮಾನ್ವಿ ದೂರಿನಲ್ಲಿ ತಿಳಿಸಿದ್ದಾರೆ.