ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನೀಟ್ ಪರೀಕ್ಷೆಯಲ್ಲಿ ವಿಜಯಪುರದ ವಿದ್ಯಾರ್ಥಿ ನಿಖಿಲ್ ಸೊನ್ನದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ರಾಷ್ಟ್ರದಲ್ಲಿ 17ನೇ ರ್ಯಾಂಕ್ ಪಡೆದಿದ್ದಾನೆ. ಈ ಸಾಧನೆ ಮಾಡಿದ ಮಗನಿಗೆ ತಂದೆ ಡಾ.ಸಿದ್ದಪ್ಪ ಹಾಗೂ ತಾಯಿ ಡಾ.ಮೀನಾಕ್ಷಿ ಸೊನ್ನದ ಸಿಹಿ ತಿನಿಸಿ ಅಭಿನಂದನೆ ಹೇಳಿದರು. ದ್ವಿತೀಯ ಪಿಯುಸಿಯಲ್ಲಿ ಶೇಕಡ 98.3ರಷ್ಟು ಅಂಕ ಗಳಿಸಿದ್ದ ನಿಖಿಲ್, ನೀಟ್ ನಲ್ಲಿ 720ಕ್ಕೆ 670 ಅಂಕ ಪಡೆದಿದ್ದಾನೆ.
ನಗರದಲ್ಲಿರುವ ಸಂಜೀವಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ದಂಪತಿಯಾಗಿರುವ ಡಾ.ಸಿದ್ದಪ್ಪ ಸೊನ್ನದ ಹಾಗೂ ಡಾ.ಮೀನಾಕ್ಷಿ ಅವರೆ ತನಗೆ ಸ್ಪೂರ್ತಿ ಎಂದು ಮಗ ನಿಖಿಲ್ ಹೇಳಿದ್ದಾನೆ. ಏಮ್ಸ್ ನಲ್ಲಿ ವೈದ್ಯಕೀಯ ಪದವಿ ಪಡೆಯಬೇಕು ಎಂದುಕೊಂಡಿದ್ದು, ನರರೋಗ ಶಸ್ತ್ರಚಿಕಿತ್ಸಕ ಆಗಬೇಕು ಎಂದುಕೊಂಡಿದ್ದೇನೆ. ಕಾಲೇಜಿನ ಶಿಕ್ಷಕರು ನನ್ನ ಅನುಮಾನಗಳಿಗೆ ಉತ್ತರಿಸಿ ಉತ್ತೇಜನ ನೀಡುತ್ತಿದ್ದರು ಎಂದು ಹೇಳಿದ್ದಾನೆ.
ರಾಜಸ್ತಾನದ ಮಹೇಶ್ ಕುಮಾರ್ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾನೆ. ಮಧ್ಯಪ್ರದೇಶದ ಉತ್ಕರ್ಷ್ ಅವಧಿಯಾ 2ನೇ ರ್ಯಾಂಕ್, ಮಹಾರಾಷ್ಟ್ರದ ಕೃಶಾಂಗ್ ಜೋಶಿ 3ನೇ ರ್ಯಾಂಕ್, ದೆಹಲಿಯ ಅವಿಕಾ ಅಗರ್ವಾಲ್ 4ನೇ ರ್ಯಾಂಕ್ ಪಡೆದಿದ್ದಾರೆ. ಈ ವರ್ಷದ ನೀಟ್ ಪರೀಕ್ಷೆಗೆ 22,09,318 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 7,22,462 ವಿದ್ಯಾರ್ಥಿನಿಯರು, 5,14,063 ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.