ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನವಭಾಗ್ ರಸ್ತೆಯಲ್ಲಿ ಫಿಶ್ ಟನಲ್ ಎಕ್ಸಪೋ ನಡೆಯುತ್ತಿದೆ. ಇಲ್ಲಿ ವಿವಿಧ ರೀತಿಯ ಮನರಂಜನೆಯು ಇದ್ದು, ರೇಂಜರ್ ಸ್ವಿಂಗ್(Ranger Swing Ride)ರೈಡ್(ಮೇಲೆ ಕೆಳಗಾಗಿ ಉಲ್ಟಾ ತಿರುಗುವ ಚರಕಿಗಾಣ) ದಿಂದ ಯುವತಿಯೊಬ್ಬಳು ಬಿದ್ದು ಮೃತಪಟ್ಟ ಘಟನೆ ಅಕ್ಟೋಬರ್ 20ರಂದು ನಡೆದಿದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ. ಬಸವನಬಾಗೇವಾಡಿಯ ಇಂಗಳೇಶ್ವರದ ನಿಖಿತಾ ಬಿರಾದಾರ ಎನ್ನುವ 21 ವರ್ಷದ ಯುವತಿ ಬಿದ್ದು ಮೃತಪಟ್ಟಿದ್ದಾಳೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗಾಂಧಿ ಚೌಕ್ ಠಾಣೆ ಪೊಲೀಸರು, ಎಕ್ಸಪೋ ಮ್ಯಾನೇಜರ್, ಆಪರೇಟರ್, ಕ್ಯಾಶಿಯರ್ ಸೇರಿದಂತೆ ಐವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇಕ್ಸಪೋದಲ್ಲಿ ಬೃಹತ್ ಯಂತ್ರಗಳಿರುವ ಆಟದ ವಸ್ತುಗಳು ಸೇರಿದಂತೆ ವಿವಿಧ ಮನರಂಜನೆಗಳಿವೆ.
ನಿಖಿತಾ, ಕುಟುಂಬಸ್ಥರು, ಸ್ನೇಹಿತರು ರೇಂಜರ್ ಸ್ವಿಂಗ್ ರೈಡ್ ನಲ್ಲಿ ಕುಳಿತಿದ್ದಾರೆ. ಆಟ ಶುರುವಾಗುತ್ತಲೇ ಭಯದಿಂದ ಎಲ್ಲರೂ ಕಿರುಚಾಡಲು ಶುರು ಮಾಡಿದ್ದಾರೆ. ನಿಖಿತಾ ತಾಯಿ ಸೇಫ್ಟಿ ಬೆಲ್ಟ್ ಸರಿಯಾಗಿದ್ಯಾ ಅನ್ನೋದು ಸೇರಿ ಸಾಕಷ್ಟು ವಿಚಾರಿಸಿದ್ದಾರಂತೆ. ಸಿಬ್ಬಂದಿ ಸರಿಯಿದೆ ಎಂದು ಹೇಳಿ ಶುರು ಮಾಡಿದ್ದಾರೆ. ಮಕ್ಕಳು ಸೇರಿ ಎಲ್ಲರೂ ಕಿರುಚಾಡುತ್ತಿದ್ದಾಗ ನಿಲ್ಲಿಸು ಎಂದು ಹೇಳಿದರೂ ಆಪರೇಟರ್ ನಿಲ್ಲಿಸಿಲ್ಲವಂತೆ ಇದೇ ವೇಳೆ ನಿಖಿತಾ ಸೇಫ್ಟಿ ಬೆಲ್ಟ್ ಸಿಡಲವಾಗಿ ಕಟ್ ಆಗಿದೆ. ಇದರಿಂದಾಗಿ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ತಲೆ, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಅಂಜಕತ್ತಾಳ್ರಿ ಬಂದ್ ಮಾಡ್ರಿ ಎಂದು ಹೇಳುವ ಮಾತುಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಅವರು ಮಾತು ಕೇಳಿದ್ದರೆ ಒಂದು ಜೀವ ಉಳಿಯುತ್ತಿತ್ತು.