ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಭಾನುವಾರ ಸಂಜೆ ಐವರು ಮಕ್ಕಳು ನಾರಾಯಣಪುರ ಗ್ರಾಮದ ಕಾಲುವೆಯಲ್ಲಿ ಮೀನು ಹಿಡಿಯಲೆಂದು ಹೋದವರು ನಾಮಪತ್ತೆಯಾಗಿದ್ದರು. ಇದರಿಂದಾಗಿ ಮಕ್ಕಳ ಕುಟುಂಬಸ್ಥರು ತೀವ್ರ ಆತಂಕದಲ್ಲಿದ್ದರು. ಕೊನೆಗೆ ಇದು ಸುಖಾಂತ್ಯವಾಗಿದ್ದು, ಗ್ರಾಮದ ದೇವಸ್ಥಾನದ ಹತ್ತಿರ ಮಕ್ಕಳು ಪತ್ತೆಯಾಗಿದ್ದಾರೆ. ಭುವನ್(08), ಕಿರಣ್(10), ಲೋಹಿತ್(10), ಲಕ್ಷ್ಮೀಶ್(12), ಧನುಷ್(14) ಅನ್ನೋ ಮಕ್ಕಳು ಪೋಷಕರ ಮಡಿಲು ಸೇರಿದ್ದಾರೆ.
ಸಂಜೆ ತುಂಬಾ ಹೊತ್ತಾದರೂ ಮಕ್ಕಳು ಕಾಣದೆ ಹೋದಾಗ ಪೋಷಕರು ಪೊಲೀಸರಿಗೆ, ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅವರು ಬಂದು ಮಕ್ಕಳನ್ನು ಕಾಲುವೆಯಲ್ಲಿ ಹುಡುಕಾಟ ನಡೆಸಿದರು. ಕತ್ತಲೆಯಾಗಿದ್ದರಿಂದ ಕಾರ್ಯಾಚರಣೆ ನಿಲ್ಲಿಸಿದ್ದರು. ಇಂದು(ಸೋಮವಾರ) ಮುಂಜಾನೆ ಸ್ಥಳೀಯರು ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಐವರು ಮಕ್ಕಳು ಪತ್ತೆಯಾಗಿದ್ದಾರೆ. ಮೀನು ಹಿಡಿಯಲು ಹೋಗಿದ್ದಕ್ಕೆ ಮನೆಯಲ್ಲಿ ಬೈಯುತ್ತಾರೆ ಎಂದು ಹೆದರಿದ ಮಕ್ಕಳು ಗುಡಿಯಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ. ಮಕ್ಕಳು ಪತ್ತೆಯಾದ ಹಿನ್ನಲೆಯಲ್ಲಿ ಕುಟುಂಬಸ್ಥರಲ್ಲಿ ಸಂತಸ ಮೂಡಿದೆ.