ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕರ್ನಾಟಕ ಸರ್ಕಾರದಿಂದ ನೀಡಲಾಗುವ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ವಿಭಾಗದಿಂದ ಸಾಹಿತಿ, ಹೋರಾಟಗಾರ ಮಂಗ್ಳೂರು ವಿಜಯ, ಬೆಂಗಳೂರು ನಗರ ವಿಭಾಗದಿಂದ ಪತ್ರಿಕೋದ್ಯಮದ ಸಾಧನೆಗಾಗಿ ಕೋಲಾರ ಮೂಲದ ಸಂಚಿಕೆ ದಿನ ಪತ್ರಿಕೆಯ ಸಿ.ಎಂ ಮುನಿಯಪ್ಪ ಅವರನ್ನುಆಯ್ಕೆ ಮಾಡಲಾಗಿದೆ.
ಮೈಸೂರು ವಿಭಾಗದಿಂದ ಹೋರಾಟಗಾರ ಹಾಸನ ಜಿಲ್ಲೆ ಸಕಲೇಶ್ವರ ತಾಲೂಕಿನ ಎಚ್.ಎನ್ ಅಣ್ಣಯ್ಯ, ಕಲಬುರಗಿ ವಿಭಾಗದಿಂದ ಸಾಹಿತಿ ಹಾಗೂ ಸಂಘಟನೆಯಲ್ಲಿ ಸಾಧನೆ ಮಾಡಿದ ಅಫಜಲಪುರದ ಹನುಮಂತರಾವ್ ದೊಡಮನಿ, ಬೆಳಗಾವಿ ವಿಭಾಗದಿಂದ ದೇವದಾಸಿ ವಿಮುಕ್ತ ಮಾಡಿದ ಸಾಧನೆಗಾಗಿ ಅಮ್ಮ ಫೌಂಡೇಶನ್ ಕಾರ್ಯದರ್ಶಿ ಶೋಭಾ ಗಸ್ತಿ ಅವರಿಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, 20 ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ. ಬೆಂಗಳೂರಿನಲ್ಲಿ ಏಪ್ರಿಲ್ 14ರಂದು ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.




