ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ(Bagalakote): ಮಾಜಿ ಅಬಕಾರಿ ಸಚಿವ, ಬಾಗಲಕೋಟೆ ಶಾಸಕ ಎಚ್.ವೈ ಮೇಟಿ(79) ಮಂಗಳವಾರ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸಿಎಂ ಸಿದ್ದರಾಮಯ್ಯ, ಸಚಿವ ಎಚ್.ಸಿ ಮಹಾದೇವಪ್ಪ ಸೇರಿ ಇತರರು ಆಸ್ಪತ್ರೆಗೆ ಭೇಟಿ ನೀಡಿದರು.
ಉಸಿರಾಟದ ಸಮಸ್ಯೆ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1994ರಲ್ಲಿ ಮತ್ತೆ ಗೆದ್ದು ಅರಣ್ಯ ಸಚಿವರಾಗಿದ್ದರು. ಆದರೆ, 96ರಲ್ಲಿ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾದರು. ಕ್ಷೇತ್ರ ವಿಂಗಡಣೆ ಬಳಿಕ 2008ರಲ್ಲಿ ಕಾಂಗ್ರೆಸ್ ಸೇರಿ ಬಾಗಲಕೋಟೆಯಿಂದ ಸ್ಪರ್ಧಿಸಿದರು. ಗೆಲುವು ಸಿಗಲಿಲ್ಲ. 2013ರಲ್ಲಿ ಗೆದ್ದು ಅಬಕಾರಿ ಸಚಿವರಾದರು.
ಮುಂದೆ 2018ರಲ್ಲಿ ಸೋಲು ಅನುಭವಿಸಿದರು. ಮುಂದೆ 2023ರ ಚುನಾವಣೆಯಲ್ಲಿ ಗೆಲುವು ದಾಖಲಿಸಿದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಮಕ್ಕಳಿದ್ದಾರೆ. ಸಿಡಿ ಪ್ರಕರಣದಲ್ಲಿ ದೊಡ್ಡ ಸುದ್ದಿಯಾಗಿ ಈ ಹಿಂದೆ ಸಚಿವ ಸ್ಥಾನ ಕಳೆದುಕೊಂಡಿದ್ದರು.



		
		
		
 
 