ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಿಂದಗಿ, ಆಲಮೇಲ ಭಾಗದಲ್ಲಿ ತೊಗರಿ ಬೆಳೆದ ರೈತರು ಬೆಳೆ ಹಾನಿಯಿಂದ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ಪರಿಹಾರ ಕೊಡುಸುವ ತಾಕತ್ತು ಇಲ್ಲದಿದ್ದರೆ ಕುರ್ಚಿಯಲ್ಲಿ ಯಾಕೆ ಕುಳಿತ್ತಿದ್ದೀರಿ ಶಾಸಕ ಅಶೋಕ ಮನಗೂಳಿಯವರೇ ಎಂದು ಮುದ್ದೇಬಿಹಾಳ ಬಿಜೆಪಿ ಮಾಜಿ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಪ್ರಶ್ನಿಸಿದರು. ಪಟ್ಟಣದಲ್ಲಿ ಗುರುವಾರ ಬಿಜೆಪಿ ರೈತ ಮೋರ್ಚಾದ ತಾಲೂಕು ಘಟಕದಿಂದ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದಾರೆ. ಕಾಂಗ್ರೆಸ್ ಶಾಸಕರಿದ್ದಾರೆ. ಎಲ್ಲರ ಮೌನವಾಗಿದ್ದಾರೆ. ತೊಗರಿ ಬೆಳೆ ಸಮೀಕ್ಷೆ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿಲ್ಲ. ಹೊಲಗಳಿಗೆ ಶಾಸಕರು ಹೋಗುತ್ತಿಲ್ಲ. ಅಧಿಕಾರಿಗಳು ಹೋಗುತ್ತಿಲ್ಲ. ತೊಗರಿ ಒಣಗಿ ಹೊಲ ಕರಿಯಾದ ಮೇಲೆ ಹೋಗಿ ತೊಗರಿನೇ ಬೆಳೆದಿಲ್ಲ ಅಂತಾ ಹೇಳುತ್ತಾರೆ. ಪಕ್ಕದ ಕಲಬುರಗಿ ಮಹಿಳಾ ಜಿಲ್ಲಾಧಿಕಾರಿ 77 ಕೋಟಿ ರೂಪಾಯಿ ಪರಿಹಾರ ಕೊಡಿಸುವ ಕೆಲಸ ಮಾಡಿದ್ದಾರೆ. ಇಲ್ಲಿಯ ಜಿಲ್ಲಾಧಿಕಾರಿ ಹೊರಗೆ ಬರುತ್ತಿಲ್ಲ ಎಂದು ಕಿಡಿ ಕಾರಿದರು.
ತೊಗರಿ ಬೆಳೆದ ರೈತರು ಕಷ್ಟದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಸರ್ವೇ ಮಾಡುತ್ತಿಲ್ಲ. ಹವಾಮಾನದಿಂದ ಆಗಿದೆಯೋ, ಕಳಪೆ ಬೀಜದಿಂದ ಆಗಿದೆಯೋ ಅನ್ನೋದು ತಿಳಿಯಬೇಕಿದೆ. ಶಾಸಕರ ಪತ್ರ ಇರದೆ ರೈತರಿಗೆ ಪರಿಹಾರ ಕೊಡಬೇಕು. ಯಾಕಂದರೆ ನಾವು ಕಟ್ಟುವ ತೆರಿಗೆಯಲ್ಲಿಯೇ ಅದನ್ನು ಕೊಡುವುದು ಎಂದು ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು. ರೈತರು ಕೃಷಿ ಇಲಾಖೆಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಹೊಲಗಳಿಗೆ ಹೋಗಿ ಸಮೀಕ್ಷೆ ಮಾಡಿಸುವ ಕೆಲಸ ಮಾಡುತ್ತಿಲ್ಲ. ಡಿಸೆಂಬರ್ 11ನೇ ತಾರೀಕನೊಳಗೆ ಪರಿಹಾರ ನೀಡಬೇಕು. ಇಲ್ಲದೆ ಹೋದರೆ ತಾಲೂಕಿನ ಕಚೇರಿಗಳಿಗೆ ಬೀಗ ಹಾಕಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ತಾಲೂಕಾಧ್ಯಕ್ಷ ಪೀರು ಕೆರೂರು ಹೇಳಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಈರಣ್ಣ ರಾವೂರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿದರು. ಅಂಬೇಡ್ಕರ್ ವೃತ್ತದಿಂದ ಕೃಷಿ ಇಲಾಖೆ ತನಕ ಎತ್ತಿನಗಾಡಿಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಿಂದಗಿ, ಆಲಮೇಲ ತಾಲೂಕಿನಲ್ಲಿ ರೈತರು ಬೆಳೆದ ತೊಗರಿ ಬೆಳೆ ಕುರಿತು ಡ್ರೋನ್ ಸಮೀಕ್ಷೆ ನಡೆಸಬೇಕು. ಬೆಳೆ ವಿಮೆ ಕಟ್ಟಿದ ರೈತರ ಹೊಲಗಳಿಗೆ ಅಧಿಕಾರಿಗಳು, ವಿಮಾ ಕಂಪನಿ ಅಧಿಕಾರಿಗಳು ಜಂಟಿ ಸರ್ವೇ ಮಾಡಬೇಕು. ರೈತ ಸಂಪರ್ಕ ಕೇಂದ್ರದಿಂದ ವಿತರಣೆಯಾದ ಬೀಜಗಳ ಗುಣಮಟ್ಟದ ತನಿಖೆಯಾಗಬೇಕು. ವಿಮೆ ಮಾಡದ ರೈತರಿಗೆ ಪರಿಹಾರ ನೀಡಬೇಕು ಎನ್ನುವ ಬೇಡಿಕೆಗಳೊಂದಿಗೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೃಷಿ ಇಲಾಖೆ ಉಪ ನಿರ್ದೇಶಕ ಶಿಂಗೇಗೋಳ ಹಾಜರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲಗೌಡ ಮಾಗಣಗೇರಿ, , ಗುರು ತಳವಾರ, ಡಿ.ಸಿ ಬಿರಾದಾರ, ವೀರುಪಾಕ್ಷ ಗಂಗಹಳ್ಳಿ, ಶ್ರೀಶೈಲ ಯಂಕಂಚಿ, ಮಹೇಶ ಚಳಕೇರಿ, ಅಶೋಕ ಗಂಗಹಳ್ಳಿ, ಮಲ್ಲನಗೌಡ ಬಗಲಿ, ಚೇತನ ರಾಂಪೂರ, ವಿನಾಯಕ ದೇವರಮನಿ, ವೀರುಪಾಕ್ಷ ಯಂಕಂಚಿ, ನೀಲಮ್ಮ ಯಡ್ರಾಮಿ, ಶ್ಯಾಮಲಾ ಮಂದೇವಾಲಿ, ಅನುಸೂಯ ಪರಗೊಂಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.