ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಅವ್ವಂಬಾವಿಯಲ್ಲಿರುವ ಶಾಸಕ ಜನಾರ್ದನ್ ರೆಡ್ಡಿ ನಿವಾಸದ ಹತ್ತಿರ ಗುರುವಾರ ರಾತ್ರಿ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ವಾಲ್ಮೀಕಿ ಬ್ಯಾನರ್ ವಿಚಾರಕ್ಕೆ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಯುವಕನೊಬ್ಬ ಮೃತಪಟ್ಟಿದ್ದಾನೆ. ಗಲಾಟೆ ಹಾಗೂ ಯುವಕ ಸಾವಿಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಐದು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಿತೇಂದ್ರ.ಆರ್ ಶುಕ್ರವಾರ ತಿಳಿಸಿದ್ದಾರೆ.
ಯುವಕನ ಸಾವು, ಮಹರ್ಷಿ ವಾಲ್ಮೀಕಿಗೆ ಅವಮಾನ, ಹಲ್ಲೆ ಹಾಗೂ ಸ್ವಯಂ ಪ್ರೇರಿತ ಪ್ರಕರಣ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಬಳ್ಳಾರಿಯ ರಾಜಕೀಯ ಮುಖಂಡರ ಖಾಸಗಿ ಅಂಗರಕ್ಷಕರ 5 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮ್ಮ ಸಿಬ್ಬಂದಿ ಬಂದೂಕು ಪ್ರಯೋಗ ಮಾಡಿಲ್ಲ. ಮೃತ ರಾಜಶೇಖರ ದೇಹದಲ್ಲಿ ಸಿಕ್ಕ ಗುಂಡು ಹಾಗೂ ಈಗ ವಶಪಡಿಸಿಕೊಂಡಿರುವ ಬಂದೂಕುಗಳಲ್ಲಿನ ಗುಂಡು ಹೋಲಿಕೆ ಮಾಡಲಾಗುತ್ತಿದೆ. ಯಾರೇ ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.




