ಪ್ರಜಾಸ್ತ್ರ ಸುದ್ದಿ
ಕಾಸರಗೋಡು(Kasaragod): ಒಂದು ಕಡೆ ಮದುವೆಗೆ ಹೆಣ್ಣು ಸಿಗುತ್ತಿಲ್ಲವೆಂದು ಯುವಕರು ಒದ್ದಾಡುತ್ತಿದ್ದಾರೆ. ಮತ್ತೊಂದು ಹೆಣ್ಮಕ್ಕಳನ್ನು ನಂಬಿಸಿ ಎರಡು, ಮೂರು, ನಾಲ್ಕು ಮದುವೆಗಳನ್ನು ಮಾಡಿಕೊಳ್ಳುವ ವಂಚಕರಿದ್ದಾರೆ. ಇದೇ ರೀತಿ ನಾಲ್ವರನ್ನು ಮದುವೆಯಾಗಿ(Marriage) ಮೋಸ ಮಾಡಿದ್ದ ವ್ಯಕ್ತಿ ಫೇಸ್ ಬುಕ್ ಮೂಲಕ ಸಿಕ್ಕಿಬಿದ್ದಿದ್ದಾನೆ. ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ಮೂಲದ ದೀಪು ಫಿಲಿಪ್(36) ಎಂಬಾತನನ್ನು ಕೊನ್ನಿ ಪೊಲೀಸರು ಬಂಧಿಸಿದ್ದಾರೆ.
ಸುಮಾರು 10 ವರ್ಷಗಳ ಹಿಂದೆ ಕಾಸರಗೋಡು ಮೂಲದ ಯುವತಿಯನ್ನು ಮದುವೆಯಾಗಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮುಂದೆ ತಲೆ ಮರೆಸಿಕೊಂಡಿದ್ದಾನೆ. ಇದೇ ಕಾಸರಗೋಡಿನ ಮತ್ತೊಬ್ಬಳನ್ನು ಮದುವೆಯಾಗಿ ತಮಿಳುನಾಡಿಗೆ ಹೋಗಿ ವಾಸವಾಗಿದ್ದಾನೆ. ಮುಂದೆ ಈಕೆಯನ್ನು ಬಿಟ್ಟು ಎರ್ನಾಕುಲಂನಲ್ಲಿ ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಇದು ಸಾಲದಂತ ಆಲಪ್ಪಳಕ್ಕೆ ಬಂದು 4ನೇ ಮದುವೆಯಾಗಿದ್ದಾನೆ. ಹೀಗಿರುವಾಗ 2ನೇ ಪತ್ನಿ ಹಾಗೂ 4ನೇ ಪತ್ನಿ ಫೇಸ್ ಬುಕ್ ನಲ್ಲಿ ಸ್ನೇಹಿತೆಯಾಗಿದ್ದಾರೆ. ಇವರು ತಮ್ಮ ಕುಟುಂಬದ ಫೋಟೋಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆಗ ದೀಪು ಫಿಲಿಪ್ ನ ಮುಖವಾಡ ಬಯಲಾಗಿದೆ. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ನಾಲ್ವರಿಗೆ ಮೋಸ(Fraud) ಮಾಡಿರುವುದು ಬೆಳಕಿಗೆ ಬಂದಿದೆ. ಇದೀಗ ಇವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.