ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದವರು ದೂರು ನೀಡಲು ಮುಂದೆ ಬರದೆ ಇರುವ ಕಾರಣ ಪ್ರಕರಣ ವಿಳಂಬವಾಗಿದೆ ಎಂದು ಎಸ್ಪಿ ಭೀಮಾಶಂಕರ ಗುಳೇದ ಹೇಳಿದ್ದಾರೆ. ಸಚಿವ ಲೆಟರ್ ಹೆಡ್ ಬಳಸಲಾಗಿದೆಯಂತೆ. ಅಲ್ಲದೆ ರಾಜ್ಯಪಾಲರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹಿ ನಕಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಮಂಜುನಾಥ ಮಲ್ಲಸರ್ಜ ಎಂಬಾತ 14 ಜನರಿಂದ 30 ಲಕ್ಷಕ್ಕೂ ಹೆಚ್ಚಿನ ಹಣ ಪಡೆದಿರುವ ದೂರು ಬಂದಿದೆ. ಈ ಬಗ್ಗೆ ಮೊದಲು ಕಾವ್ಯ ಅನ್ನೋ ಮಹಿಳೆ ಹೇಳಿದ್ದು, ದೂರು ನೀಡಿಲ್ಲವಂತೆ. ಇದಾದ ನಾಲ್ಕು ತಿಂಗಳ ಬಳಿಕ ಮತ್ತೊಬ್ಬ ಮಹಿಳೆ ದೂರು ದಾಖಲಿಸಿದ್ದರಿಂದ ಪ್ರಕರಣ ದಾಖಲಾಗಿದೆ. ಆರೋಪಿ ಜಾಮೀನು ಪಡೆದಿದ್ದರಿಂದ ಬಂಧಿಸಿಲ್ಲವೆಂದು ಹೇಳಿದ್ದಾರೆ. ಇದರಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತಸಹಾಯಕ ಸೋಮನಗೌಡ ಭಾಗಿಯಾಗಿದ್ದಾನೆ ಎನ್ನುವ ಆರೋಪವಿದೆ. ಆದರೆ, ಅನ್ಯಾಯಕ್ಕೆ ಒಳಗಾದವರನ್ನೇ ಪದೆಪದೆ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.