ಪ್ರಜಾಸ್ತ್ರ ಸುದ್ದಿ
ಅಮರಾವತಿ(Amaravati): ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಪಂಚ ಗ್ಯಾರೆಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯ ಮಾದರಿಯಲ್ಲಿ ನೆರೆಯ ಆಂಧ್ರಪ್ರದೇಶದಲ್ಲಿ ಜಾರಿಗೆ ಬಂದಿದೆ. ಮಹಿಳೆಯರಿಗೆ ಉಚಿತ ಬಸ್ ಯೋಜನೆಯಾದ ಸ್ತ್ರೀ ಶಕ್ತಿ ಯೋಜನೆಗೆ 79ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಚಾಲನೆ ನೀಡಿದ್ದಾರೆ.
ಗುಂಟೂರು ಜಿಲ್ಲೆಯ ತಾಡೇಪಳ್ಳಿ ಮಂಡಲದಿಂದ ವಿಜಯವಾಡದ ಪಂಡಿತ ನೆಹರು ಬಸ್ ನಿಲ್ದಾಣದವರೆಗೆ ಮಹಿಳೆಯರೊಂದಿಗೆ ಸಿಎಂ ನಾಯ್ಡು, ಡಿಸಿಎಂ ಪವನ್ ಕಲ್ಯಾಣ್, ಸಚಿವ ನಾರಾ ಲೋಕೇಶ್ ಅವರು ಪ್ರಯಾಣಿಸುವ ಮೂಲಕ ಉಚಿತ ಬಸ್ ಯೋಜನೆಯನ್ನು ಜಾರಿಗೆ ತಂದರು. ಆಂಧ್ರದ 5 ಬಗೆಯ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವ ಮತದಾರರ ಗುರುತಿನ ಚೀಟಿಯಲ್ಲಿ ಯಾವುದಾದರು ಒಂದು ತೋರಿಸಿ ಪ್ರಯಾಣಿಸಬಹುದು.