ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಇಲ್ಲಿನ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ನಡೆಯಲಿದೆ. ಡಿಸೆಂಬರ್ 9ರಿಂದ 20ರ ತನಕ ಅಧಿವೇಶನ ನಡೆಯಲಿದೆ. ಈ ವೇಳೆ ಪ್ರಮುಖ 15 ವಿಧೇಯಕಗಳು ಮಂಡನೆಯಾಗಲಿವೆ ಎಂದು ತಿಳಿದು ಬಂದಿದೆ. ಆದರೆ, ಈ ವಿಧೇಯಕಗಳು, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗಿಂತ ಮುಡಾ, ವಕ್ಫ್ ವಿಚಾರದಲ್ಲಿಯೇ ಮುಳುಗಿ ಮುಗಿಯುತ್ತಾ ಎನ್ನುವ ಪ್ರಶ್ನೆ ಮೂಡಿದೆ.
ಸರ್ಕಾರವನ್ನು ಹೇಗಾದರೂ ಮಾಡಿ ಕಟ್ಟಿ ಹಾಕಬೇಕು ಎಂದು ವಿಪಕ್ಷಗಳು ಸಜ್ಜಾಗಿವೆ. ಅದರಲ್ಲಿ ಪ್ರಮುಖ ಅಸ್ತ್ರಗಳಾಗುವುದು ಮುಖ್ಯಮಂತ್ರ ಹಾಗೂ ಅವರ ಕುಟುಂಬದ ಮೇಲೆ ಕೇಳಿ ಬಂದಿರುವ ಮುಡಾ ನಿವೇಶನದ ಹಗರಣ, ವಕ್ಫ್ ವಿಚಾರವಾಗಿ ವಸತಿ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ನಡೆದ ವಕ್ಫ್ ಆಸ್ತಿ ರಕ್ಷಣೆ ವಿಚಾರ, ಪಡಿತರ ಚೀಟಿ ವಿಚಾರ, ವಾಲ್ಮೀಕಿ ನಿಗಮದ ಹಗರಣವೂ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಈ ವಿಚಾರಗಳಲ್ಲಿ ಕಲಾಪದ ಸಮಯವನ್ನು ಹಾಳು ಮಾಡಿ ಅದೇ ರಾಗ ಅದೇ ಹಾಡು ಮಾಡುತ್ತಾರ ಅನ್ನೋದು ತಿಳಿಯಲಿದೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ(ತಿದ್ದುಪಡಿ) ವಿಧೇಯಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ತಿದ್ದುಪಡಿ)ಆದ್ಯಾದೇಶ 2024, ವಿಶ್ವವಿದ್ಯಾಲಯಗಳ(ತಿದ್ದುಪಡಿ) ವಿಧೇಯಕ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಆದ್ಯಾದೇಶ 2024, ಕರ್ನಾಟಕ ಪ್ರವಾಸೋದ್ಯಮ ರೂಪ್ ವೇಗಳ ವಿಧೇಯಕ, ಬೇಲೂರು, ಹಳೇಬಿಡು ವಿಶ್ವ ಪರಂಪರೆಯ ನಿರ್ವಹಣೆ ಪ್ರಾಧಿಕಾರ ವಿಧೇಯಕ, ಗಾಣಾಗಪುರದ ದತ್ತಾತ್ರೇಯ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ವಿಧೇಯಕ ಸೇರಿದಂತೆ 15 ವಿಧೇಯಕಗಳ ಮಂಡನೆಯಾಗುವ ಸಾಧ್ಯತೆಗಳಿವೆ.