ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದು ಹೊರ ಬಂದು ಸುಮಾರು ಮೂರು ವಾರಗಳು ಕಳೆದಿವೆ. ಮಧ್ಯಂತರ ಜಾಮೀನು ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಗುರುವಾರ ಹೇಳಿದರು. ಚಿಕಿತ್ಸೆ ಪಡೆದ ಬಳಿಕ ಜೈಲಿಗೆ ಹೋಗಬೇಕು. ಜಾಮೀನು ನೀಡದಂತೆ ಅರ್ಜಿ ಸಲ್ಲಿಸಿದ್ದೇವೆ ಎಂದರು.
ಚಿಕಿತ್ಸೆಗೆಂದು ಮಧ್ಯಂತರ ಜಾಮೀನು ಪಡೆದಿದ್ದಾರೆ. ಜಾಮೀನು ಅವಧಿ ವಿಸ್ತರಣೆಗಾಗಿ ಮನವಿ ಮಾಡಿರುವುದು ಗೊತ್ತಿಲ್ಲ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸುವ ಸಂಬಂಧ ಸಾಕ್ಷ್ಯ ಸಂಗ್ರಹ ಕೆಲಸ ನಡೆಯುತ್ತಿದೆ. ಸಾಕ್ಷ್ಯ ಕಲೆ ಹಾಕಿದ ಮೇಲೆ ದೋಷಾರೋಪಪಟ್ಟಿ ಸಲ್ಲಿಸಲಾಗುವುದು ಎಂದು ಹೇಳಿದರು. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದಾರೆ. 140ಕ್ಕೂ ಹೆಚ್ಚು ದಿನಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಹಾಗೂ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಸಧ್ಯ ವೈದ್ಯಕೀಯ ಕಾರಣಕ್ಕೆ 6 ವಾರಗಳ ಮಧ್ಯಂತರ ಜಾಮೀನಿನ ಮೇಲೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.