ಪ್ರಜಾಸ್ತ್ರ ಸುದ್ದಿ
ಇಂಡಿಯನ್ ಕ್ರಿಕೆಟ್ ಟೀಂನ ಸ್ಫೋಟಕ ಬ್ಯಾಟ್ಸಮನ್ ಶಿಖರ್ ಧವನ್(shikhar dhawan) ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಶಿಖರ್ ಧವನ್ ಓಪನಿಂಗ್ ಬ್ಯಾಟ್ಸಮನ್ ಆಗಿ ಕ್ರಿಸ್ ಗೆ ಬರುತ್ತಿದ್ದರು. ಅಂತಾರಾಷ್ಟ್ರೀಯ ಹಾಗೂ ಡೊಮೆಸ್ಟಿಕ್ ಕ್ರಿಕೆಟ್ ಆಟಕ್ಕೆ ನಿವೃತ್ತಿ ಹೇಳಿದ್ದಾರೆ. ಐಪಿಎಲ್ ನಲ್ಲಿ ಮುಂದುವರೆಯುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಧವನ್ ಬ್ಯಾಟಿಂಗ್ ನೋಡಬಹುದು.
ಹಿಂದಿನ ದಿನಗಳೊಂದಿಗೆ ಮುಂದಿನ ಹೆಜ್ಜೆ ಇಡಲಾಗುತ್ತಿದೆ. ನನ್ನ ಕ್ರಿಕೆಟ್(cricketer) ಬದುಕಿನಲ್ಲಿ ಬೆಂಬಲ ನೀಡಿದ ಕುಟುಂಬ, ಕೋಚ್ ಗಳು, ಅಭಿಮಾನಿಗಳಿಗೆ ಧನ್ಯವಾದಗನ್ನು ಹೇಳುತ್ತೇನೆ. ನಿವೃತ್ತಿ ಘೋಷಣೆ ಬಗ್ಗೆ ದುಃಖವಿಲ್ಲ. ಸಾಕಷ್ಟು ನೆನಪುಗಳೊಂದಿಗೆ ಪ್ರೀತಿ, ಗೌರವ ಹೊತ್ತುಕೊಂಡು ಹೋಗುತ್ತಿದ್ದೇನೆ. ನನ್ನ ಕ್ರಿಕೆಟ್ ಸ್ನೇಹಿತರು, ಬಿಸಿಸಿಐ, ಡಿಡಿಸಿಐ ನನಗೆ ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದಗಳು. ದೇಶಕ್ಕಾಗಿ ಆಡಿದ ಬಗ್ಗೆ ನನ್ನ ಹೃದಯದಲ್ಲಿ ಖುಷಿಯಿದೆ. ಇನ್ಮುಂದೆ ದೇಶಕ್ಕೆ ಆಡದೆ ಇರಬಹುದು. ಆದರೆ, ಆಡುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
2010, ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ(ODI) ಪಂದ್ಯವಾಡುವ ಮೂಲಕ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಬಂದರು. ಡಿಸೆಂಬರ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿ ಕೊನೆಯದಾಗಿದೆ. ಇಲ್ಲಿಯವರೆಗೂ 167 ಏಕದಿನ ಪಂದ್ಯಗಳಿಂದ 17 ಶತಕ, 39 ಅರ್ಧಶತಕ ಸಮೇತ 6,793 ರನ್ ಗಳಿಸಿದ್ದಾರೆ. ಟೆಸ್ಟ್(Test) ಸಹ ಆಸ್ಟ್ರೇಲಿಯಾ ವಿರುದ್ಧವೇ 2013ರಲ್ಲಿ ಶುರು ಮಾಡಿದರು. ಸೆಪ್ಟೆಂಬರ್ 2018 ಇಂಗ್ಲೆಂಡ್ ವಿರುದ್ಧ ಆಡಿದ್ದು ಕೊನೆಯ ಟೆಸ್ಟ್ ಸರಣಿ. 34 ಟೆಸ್ಟ್ ಪಂದ್ಯಗಳಿಂದ 7 ಶತಕ, 5 ಅರ್ಧ ಶತಕದೊಂದಿಗೆ 2,315 ರನ್ ಗಳಿಸಿದ್ದಾರೆ.
ಇನ್ನು 68 ಟಿ-20(T-20) ಪಂದ್ಯಗಳಿಂದ 1,759 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕಗಳಿವೆ. ಶಿಖರ್ ಧವನ್ ಅಂಡರ್ 16 ತಂಡದಲ್ಲಿ ಆಡುವ ಮೂಲಕ 1999ರಲ್ಲಿ ಕ್ರಿಕೆಟ್ ಕರಿಯರ್ ಶುರುವಾಯ್ತು. 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟೂಫಿ ವಿನ್ ತಂಡದಲ್ಲಿದ್ದರು. 2017ರ ರನ್ನರ್ ಅಪ್ ತಂಡದಲ್ಲಿಯೂ ಇದ್ದರು. 2014ರ ಟಿ-20 ರನ್ನರ್ ಅಪ್ ತಂಡದಲ್ಲಿದ್ದರು. 2016 ಹಾಗೂ 2018ರ ಏಷ್ಯ ಕಪ್ ತಂಡದಲ್ಲಿಯೂ ಆಡಿದ್ದಾರೆ. ಐಪಿಎಲ್ ನಲ್ಲಿ ಪಂಜಾಬ್ ತಂಡದಲ್ಲಿ ಆಡುವ ಮೂಲಕ ಹೊಡಿ ಬಡಿ ಆಟದಲ್ಲಿಯೂ ಮಿಂಚಿದರು.