ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ರಾಷ್ಟ್ರಪತಿ ಮಹಾತ್ಮ ಗಾಂಧಿ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದ್ದು ಅಂದರೆ ಅದು ಬೆಳಗಾವಿಯಲ್ಲಿ ಡಿಸೆಂಬರ್ 27, 1924ರಲ್ಲಿ. ಈ ಸಮಾವೇಶಕ್ಕೆ 100 ವರ್ಷ ತುಂಬಿದ ಹಿನ್ನಲೆಯಲ್ಲಿ ಡಿಸೆಂಬರ್ 26 ಹಾಗೂ 27ರಂದು ಗಾಂಧಿ ಭಾರತ ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಇದಕ್ಕಾಗಿ ಸಾಕಷ್ಟು ಖರ್ಚು ಮಾಡಿ 2 ದಿನ ಅದ್ಧೂರಿ ಕಾರ್ಯಕ್ರಮ ನಡೆಸುತ್ತಿದ್ದು, ಕಾಂಗ್ರೆಸ್ ನಾಯಕ ಬ್ಯಾನರ್ ಗಳಲ್ಲಿ ದೇಶದ ನಕಾಶವನ್ನೇ ಬದಲು ಮಾಡುವ ಮೂಲಕ ದೇಶದ್ರೋಹ ಕೆಲಸ ಮಾಡಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ. ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹ. ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಎಂತಹಾ ಹೀನ ಕೆಲಸಕ್ಕಾದರೂ ‘ಸಿದ್ಧ’ ಎಂಬುದಕ್ಕೆ ಬೆಳಗಾವಿಯಲ್ಲಿ ಹಾಕಿಸಿರುವ ಬ್ಯಾನರ್ ಗಳೇ ಸಾಕ್ಷಿ. ಸಿಎಂ ಸಿದ್ದರಾಮಯ್ಯನವರೆ ಕೂಡಲೇ ಈವ ವಿವಾದಿತ ಬ್ಯಾನರ್ ಗಳನ್ನು ತೆರವುಗೊಳಿಸಿ ಭಾರತದ ನಕಾಶೆಯನ್ನು ತಿರುಚಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಾಗ್ದಾಳಿ ನಡೆಸಿದೆ.
ಇನ್ನು ಜೆಡಿಎಸ್ ಸಹ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಬೆಳಗಾವಿಯಲ್ಲಿ ಗಾಂಧಿ ಭಾರತ ಹೆಸರಿನಲ್ಲಿ ಹಾಕಿಸಿರುವ ಭಾರತದ ನಕ್ಷೆಯಲ್ಲಿ ಕಾಶ್ಮೀರ ಭೂಭಾಗವನ್ನೇ ಕೈಬಿಟ್ಟಿದೆ ಇಟಲಿ ಕಾಂಗ್ರೆಸ್. ಭಾರತದ ನಕ್ಷೆಯನ್ನು ತಿರುಚುವುದು, ಮಾರ್ಪಡು ಮಾಡುವುದು ದೇಶದ್ರೋಹದಂತಹ ಗಂಭೀರ ಅಪರಾಧಿ ಕೃತ್ಯ. ಸಮಾವೇಶದ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದಕ್ಕೆ ನೇರ ಹೊಣೆಗಾರರು ಎಂದು ಕಿಡಿ ಕಾರಿದೆ.