ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಈ ಬಾರಿ ಹಿರಿಯ ಗಾಂಧಿವಾದಿ ಪ್ರೊ.ಜಿ.ಬಿ ಶಿವರಾಜು ಹಾಗೂ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀ ಗುದ್ದೆಪ್ಪ ಹಳ್ಳಿಕೇರಿ ಸ್ಮಾರ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಆಯ್ಕೆ ಆಗಿದೆ. 2014ರಲ್ಲಿ ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಸ್ಥಾಪಿಸಿ ಆದೇಶ ಹೊರಡಿಸಿದೆ. 2023ರ ತನಕ 8 ಸಾಧಕರಿಗೆ, 2 ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗಿದೆ.
ಅಕ್ಟೋಬರ್ 2ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಮೊತ್ತವನ್ನು ತಲಾ 2.5 ಲಕ್ಷಗಳಂತೆ ಸಮನಾಗಿ ಪುರಸ್ಕಾರ ನೀಡಿ ಗೌರವಿಸಲಾಗುವುದು. ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಸನತ್‍ಕುಮಾರ್ ಬೆಳಗಲಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ವೂಡೆ ಪಿ.ಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಅವರು ಸದಸ್ಯತ್ವದಲ್ಲಿ ಆಯ್ಕೆ ಮಾಡಲಾಗಿದೆ.