ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಗಣೇಶಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಆಕ್ಷೇಪಾರ್ಹ ಚಿತ್ರವೊಂದನ್ನು ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣದ ಘಟನೆ ಇಲ್ಲಿನ ಮಟ್ಟಿಕಲ್ ನಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಸಂಘಪರಿವಾರದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ವೀರ ಸಾವರ್ಕರ್ ಯುವಕರ ತಂಡದಿಂದ ಮಟ್ಟಿಕಲ್ ನಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿ ಸಾವರ್ಕರ್ ಸೇರಿದಂತೆ ಅನೇಕ ಇತಿಹಾಸಕಾರರ ಫೋಟೋಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಶಿವಾಜಿ ಹಾಗೂ ಅಫ್ಜಲ್ ಖಾನ್ ನಡುವಿನ ಸಂಘರ್ಷದ ಫೋಟೊ ಹಾಕಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕೆಲವರು ತಕರಾರು ತೆಗೆದು, ಇದು ಎರಡು ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತೆ ಎಂದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಫೋಟೋ ತೆರವಿಗೆ ಸೂಚಿಸಿದ್ದಾರೆ. ಅದಕ್ಕೆ ಗಣೇಶ ಸಮಿತಿಯವರು ನಿರಾಕರಿಸಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲವರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಸಮಿತಿಯವರು ಶುಕ್ರವಾರ ಮಧ್ಯಾಹ್ನದವರೆಗೆ ಸಮಯ ಕೇಳಿದ್ದು, ಏನಾಗುತ್ತೆ ಎನ್ನುವ ಕುತೂಹಲ ಮೂಡಿದೆ.