ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಗೃಹ ಸಚಿವ ಜಿ.ಪರಮೇಶ್ವರ್ ಅವರ ಒಡೆತನದ ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಮಾಡಿದೆ. ಕಳೆದ ಎರಡು ದಿನಗಳಿಂದ ಪರಿಶೀಲನೆ ನಡೆಯುತ್ತಿದೆ. ಅಕ್ರಮ ಬಂಗಾರ ಕಳ್ಳಸಾಗಾಟ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಪ್ರಕರಣ ಸಂಬಂಧ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಟಿ ರನ್ಯಾ ರಾವ್ ಮದುವೆಗೆ ಗಿಫ್ಟ್ ಆಗಿ ಪರಮೇಶ್ವರ್ ಅವರು 15 ರಿಂದ 25 ಲಕ್ಷ ರೂಪಾಯಿ ನೀಡಿದ್ದಾರೆ. ಇದನ್ನು ಅವರೆ ಹೇಳಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಪರಮೇಶ್ವರ್ ಪ್ರಭಾವಿ ವ್ಯಕ್ತಿ. ಆ ಹೆಣ್ಮಗಳು ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಪರಮೇಶ್ವರ್ ಅವರು ಗೃಹ ಸಚಿವರು. ಅವರ ಮೇಲೆ ಜವಾಬ್ದಾರಿಯಿದೆ. ಚಾರಿಟೇಬಲ್ ಟ್ರಸ್ಟ್ ಗಳು ಸಾಕಷ್ಟು ನೆರವು ನೀಡುವ ಕೆಲಸ ಮಾಡುತ್ತವೆ ಎಂದು ಹೇಳುವ ಮೂಲಕ ಪರಮೇಶ್ವರ್ ಅವರನ್ನು ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ರನ್ಯಾ ರಾವ್ ಖಾತೆಗೆ ಪರಮೇಶ್ವರ್ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ 45 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ ಎನ್ನುವ ಆರೋಪವಿದೆ.
ರನ್ಯಾ ರಾವ್ ಪ್ರಕರಣದಿಂದಲೇ ಇಡಿ ದಾಳಿ ನಡೆದಿದೆ ಎಂದು ಯಾರು ಹೇಳಿದ್ದಾರೆ. ಅವರು ತನಿಖೆ ನಡೆಸಿ ವರದಿ ನೀಡಲಿ. ಆಮೇಲೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಟಿಗೆ ನೀವು ಗಿಫ್ಟ್ ನೀಡಿದ್ದೀರಿ ಎನ್ನುವ ಡಿ.ಕೆ ಶಿವಕುಮಾರ್ ಹೇಳಿಕೆಯ ಪ್ರಶ್ನೆಗೆ, ಅವರ ಹತ್ತಿರ ಆ ಬಗ್ಗೆ ಕೇಳಿ. ನನ್ನೇಕೆ ಕೇಳುತ್ತೀರಿ ಎಂದರು.