ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಇವತ್ತು ಪ್ರತಿಯೊಂದನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಹಲವಾರು ಮೋಸದ ಕೃತ್ಯಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ. ಆದರೂ ಸಹ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಇಲ್ಲೊಬ್ಬ ವೃದ್ಧ ಒಂದು ಲೀಟರ್ ಹಾಲು ಆನ್ಲೈನ್ ನಲ್ಲಿ ಖರೀದಿಸಲು ಹೋಗಿ 18.5 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಮುಂಬೈನ ವಡಾಲಾದಲ್ಲಿ ನಡೆದಿದೆ.
ಸುಮಾರು 71 ವರ್ಷದ ವೃದ್ಧ ಆಗಸ್ಟ್ ತಿಂಗಳ ಆರಂಭದಲ್ಲಿ ಆನ್ಲೈನ್ ಮೂಲಕ ಒಂದು ಲೀಟರ್ ಹಾಲು ಖರೀದಿಸಲು ಹೋಗಿದ್ದಾರೆ. ಆದರೆ, ಆಕೆಯ ಮೂರು ಬ್ಯಾಂಕ್ ಗಳಿಂದ 18.5 ಲಕ್ಷ ರೂಪಾಯಿ ವಂಚಕರು ದೋಚಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. ವೃದ್ಧೆಗೆ ಅಪ್ಲಿಕೇಷನ್ ಕಂಪನಿಯ ಸಿಇಒ ಎಂದು ದೀಪಕ್ ಎನ್ನುವ ವ್ಯಕ್ತಿ ಪರಿಚಿಸಿಕೊಂಡಿದ್ದಾನೆ. ಹಾಲು ಆರ್ಡರ್ ಪಡೆಯಲು ಸುಮಾರು 1 ಗಂಟೆಯ ಕಾಲ ಮಾತನಾಡಿ ಹಲವು ಮಾಹಿತಿ ಪಡೆದಿದ್ದಾನೆ. ಆಗ ವೃದ್ಧೆ ಸಾಕಾಗಿ ಫೋನ್ ಕಟ್ ಮಾಡಿದ್ದಾರೆ.
ಮರುದಿನ ಮತ್ತೆ ಫೋನ್ ಮಾಡಿದ ವ್ಯಕ್ತಿ ಹಲವು ಮಾಹಿತಿಯನ್ನು ಪಡೆದಿದ್ದಾನೆ. ಇದಾದ ಕೆಲವು ದಿನಗಳ ಬಳಿಕ ವೃದ್ಧೆ ಬ್ಯಾಂಕಿಗೆ ಹೋದಾಗ ಒಂದು ಖಾತೆಯಿಂದ 1.7 ಲಕ್ಷ ರೂಪಾಯಿ ವಂಚಿಸಲಾಗಿದೆ. ಇನ್ನೆರಡು ಖಾತೆಗಳನ್ನು ಪರಿಶೀಲನೆ ನಡೆಸಿದಾಗ ಅಲ್ಲಿಯೂ ಲಕ್ಷ ಲಕ್ಷ ಹಣ ವಂಚಿಸಲಾಗಿದೆ. ಹೀಗೆ ಮೂರು ಬ್ಯಾಂಕ್ ಖಾತೆಯಿಂದ ಬರೋಬ್ಬರಿ 18.5 ಲಕ್ಷ ರೂಪಾಯಿ ದೋಚಲಾಗಿದೆ ಎಂದು ತಿಳಿದು ಬಂದಿದೆ.