ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ವಾಲ್ಮೀಕಿ ಅಭಿವೃದ್ಧಿ(Valmiki Nigama) ನಿಗಮದಲ್ಲಿ ಹಗರಣದಲ್ಲಿ ಹಾಗೂ ಮುಡಾದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಪಾದಯಾತ್ರೆಗೆ ಸಜ್ಜಾಗಿದೆ. ಆಗಸ್ಟ್ 3ರಂದು ಜೆಡಿಎಸ್ ಜೊತೆಗೂಡಿ ಮೈಸೂರಿಗೆ ಪಾದಯಾತ್ರೆ ನಡೆಸಲು ಸಜ್ಜಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿರುವ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಲಾಗಿದೆ.
ಸಭೆ ಬಳಿಕ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಪಾತ್ರವಿಲ್ಲ. ಹಣಕಾಸು ಇಲಾಖೆಯ ಪಾತ್ರ ಸಹ ಇಲ್ಲ. ಇನ್ನು ಮುಡಾ(MUDA) ವಿಚಾರದಲ್ಲಿ ಕಾನೂನು ಬಾಹಿರವಾಗಿ ಏನೂ ನಡೆದಿಲ್ಲ ಎಂದಿದ್ದಾರೆ. ಎಲ್ಲವೂ ನಿಯಮಗಳ ಪ್ರಕಾರವೇ ನಡೆದಿದೆ ಎಂದು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಸಿದ್ದೇವೆ ಅಂತಾ ಹೇಳಿದ್ದಾರೆ. ಪರಿಶಿಷ್ಠ ಪಂಗಡಕ್ಕೆ ಸೇರಿದ ಹಣ ದುರುಪಯೋಗ ಆಗಿಲ್ಲ. ವಾಲ್ಮೀಕಿ ಹಗರಣದಲ್ಲಿ ಹಣ ವಶಪಡಿಸಿಕೊಳ್ಳಲಾಗುತ್ತಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎನ್ನುವುದನ್ನೂ ಅರ್ಥ ಮಾಡಿಸಿದ್ದೇವೆ.
ಬಿಜೆಪಿಯ ಸೇಡಿನ ಮತ್ತು ಅಸೂಯೆಯ ರಾಜಕಾರಣ ಹೈಕಮಾಂಡ್ ಗೂ ಮನವರಿಕೆಯಾಗಿದೆ. ಬಿಜೆಪಿಯ ಪಾದಯಾತ್ರೆಗೆ ಪ್ರತಿಯಾಗಿ ಏನು ಮಾಡಬೇಕು ಎನ್ನುವುದನ್ನು ಬೆಂಗಳೂರಿಗೆ ತೆರಳಿದ ಬಳಿಕ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೇಂದ್ರ ಬಜೆಟ್(Budget) ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಬಜೆಟ್ ಪೂರ್ವ ಸಭೆಯಲ್ಲಿ ರಾಜ್ಯದಿಂದ ಇಟ್ಟಿದ್ದ ಯಾವ ಬೇಡಿಕೆಗಳನ್ನೂ ಈಡೇರಿಸಲಾಗಿಲ್ಲ. ಹೀಗಾಗಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎನ್ನುವ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಹುನ್ನಾರದಲ್ಲಿ ಅವರಿಗೆ ಎಳ್ಳಷ್ಟೂ ಯಶಸ್ಸು ಸಿಗುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಭೆಯಲ್ಲಿ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ್, ಕೆ.ಸಿ ವೇಣುಗೋಪಾಲ್ ಸೇರಿ ಇತರರು ಭಾಗವಹಿಸಿದ್ದರು.