ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಶಿವಮೊಗ್ಗದಲ್ಲಿ ನಿಯಮಿತವಾಗಿ ಸಹ್ಯಾದ್ರಿ ಉತ್ಸವ ನಡೆಸಲು ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಶಿವಮೊಗ್ಗ ಬಿಜೆಪಿ ಶಾಸಕ ಎಸ್.ಎನ್ ಚನ್ನಬಸಪ್ಪ ಬುಧವಾರ ಸದನದಲ್ಲಿ ಕೋರಿದರು. ಅಲ್ಲದೆ ಕೊಪ್ಪಳದಲ್ಲಿ ಆನೆಗುಂದಿ ಉತ್ಸವ ಪುನಃ ಪ್ರಾರಂಭಿಸಬೇಕು ಎಂದು ಶಾಸಕ ಜನಾರ್ಧನ್ ರೆಡ್ಡಿ ಕೇಳಿದರು. ಈ ವೇಳೆ ಡಿಜೆ ವಿಚಾರ ಪ್ರಸ್ತಾಪವಾಯಿತು. ಆಗ ಸಚಿವ ಶಿವರಾಜ ತಂಗಡಗಿ, ಡಿಜೆಯಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಡಿಜೆ ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ಯಾವುದೇ ಆಚರಣೆ, ಮೆರವಣಿಗೆ ಇರಲಿ ಡಿಜೆ, ಐಟಂ ಸಾಂಗ್ ಗಳು ಇರುತ್ತವೆ. ಇದಿಲ್ಲದಿದ್ದರೆ ನಮ್ಮ ದೇವರುಗಳು ಮುಂದೆ ಸಾಗುವುದಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಡಿಜೆ, ಐಟಂ ಸಾಂಗ್ ನಿಂದ ನಮ್ಮ ಸಂಸ್ಕೃತಿಗೆ ಯಾವುದೂ ಒಳಿತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಇದಕ್ಕೆ ಬಿಜೆಪಿ ಶಾಸಕ ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಡಿಜೆ ಅವರಿಗೆ ಬೇಡದಿರಬಹುದು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮಸೀದಿಗಳಲ್ಲಿ ಆಜಾನ್ ಕೂಗುವುದನ್ನು ನಿಷೇಧಿಸಬೇಕು. ಅದನ್ನು ಮಾಡುವಿರಾ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ ಖಾದರ್, ಡೆಸಿಬಲ್ ಪ್ರಮಾಣ ಎಷ್ಟು ಇರಬೇಕು ಅನ್ನೋದನ್ನು ಸುಪ್ರೀಂ ಕೋರ್ಟ್ ನಗದಿಪಡಿಸಿದೆ. ಎಲ್ಲ ಸರ್ಕಾರಗಳು ಇದನ್ನು ಅನುಸರಿಸಬೇಕು ಎಂದರು. ಡಿಜೆ ನಿಷೇಧ ಚಿಂತನೆಗೆ ಬಿಜೆಪಿ ಶಾಸಕ ಎಸ್.ಸುರೇಶಕುಮಾರ ಸಹಮತ ವ್ಯಕ್ತಪಡಿಸಿದರು.




