ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮೈಸೂರು ಅಭಿವೃದ್ಧಿ(MUDA) ಪ್ರಾಧಿಕಾರದಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಜೆ ಅಬ್ರಹಾಂ ಹಾಗೂ ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬುವರು ಖಾಸಗಿ ದೂರಿಗೆ ಸಂಬಂಧಪಟ್ಟಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17 ಎ ಹಾಗೂ ಭಾರತೀಯ ಸುರಕ್ಷಾ ಸಂಹಿತೆ-2023 ಸೆಕ್ಷನ್ 218ರ ಅಡಿಯಲ್ಲಿ ವಿಚಾರಣೆಗೆ ಅನುಮತಿ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಸಲ್ಲಿಸಿರುವ ಅರ್ಜಿಯನ್ನು ಒಪ್ಪಬಾರದು. ಸಿಎಂಗೆ ನೀಡಿರುವ ಶೋಕಾಸ್ ನೋಟಿಸ್ ನಲ್ಲಿ ಈಗಾಗ್ಲೇ ಎಲ್ಲ ಉತ್ತರವನ್ನು ಸಲ್ಲಿಸಿದ್ದಾರೆ ಎಂದು ಸಲಹೆ ನೀಡಿತ್ತು. ಇದೀಗ ಅದನ್ನು ತಿರಸ್ಕರಿಸಿರುವ ರಾಜ್ಯಪಾಲರು(tharachand gehlot) ವಿಚಾರಣೆಗೆ ಅನುಮತಿ ನೀಡಿದ್ದಾರೆ. ಮಧ್ಯಪ್ರದೇಶ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2004ರಲ್ಲಿ ನೀಡಿರುವ ತೀರ್ಪಿನ ಬಗ್ಗೆ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ತನಿಖೆ ಈಗ ಏನಾಗುತ್ತೆ?
ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದರಿಂದ ಅರ್ಜಿದಾರರು ಸೆಷನ್ಸ್ ಕೋರ್ಟ್ ಗೆ ಹೋಗಿ ತನಿಖೆಗೆ ಆದೇಶ ನೀಡುವಂತೆ ಮನವಿ ಸಲ್ಲಿಸುತ್ತಾರೆ. ಕೋರ್ಟ್ ಮನವಿಯನ್ನು ಪುರಸ್ಕರಿಸಬಹುದು ಅಥವ ತಿರಸ್ಕರಿಸಬಹುದು. ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ಸ್ವೀಕಾರವಾದರೆ ಸಿಎಂ ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಹೋಗುತ್ತಾರೆ. ಅಲ್ಲಿಯೂ ತನಿಖೆಗೆ ಸೂಚಿಸಿದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗುತ್ತಾರೆ. ಅಲ್ಲಿಯೂ ಸಹ ತನಿಖೆಗೆ ಆದೇಶಿಸಿದರೆ ಪೊಲೀಸ್ ಇಲ್ಲವೆ ಲೋಕಾಯುಕ್ತ ಅಂಗಳಕ್ಕೆ ಬರುತ್ತೆ. ಇದಕ್ಕೆ ತೆಗೆದುಕೊಳ್ಳುವ ಸಮಯ ತನಿಖೆಯ ಮೇಲೆ ನಿಂತಿರುತ್ತೆ.