Ad imageAd image

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕ್ಕೆ ಜಿ.ಪಂ ಸಿಇಒ ಸೂಚನೆ

Nagesh Talawar
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕ್ಕೆ ಜಿ.ಪಂ ಸಿಇಒ ಸೂಚನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಗ್ರಾಮ ಹಾಗೂ ವಸತಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವ ಮೂಲಕ ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತಿಯ ಸಭಾಭವನದಲ್ಲಿ ಶನಿವಾರ ಜಲಧಾರೆ ಮತ್ತು ಜಲ್ ಜೀವನ್ ಮಿಷನ್ ಯೋಜನೆಗಳ ಕುರಿತು ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ಎಲ್ಲ ಉಪ-ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಶಾಖಾಧಿಕಾರಿಗಳು ಹಾಗೂ ಜಲಧಾರೆ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರು ಮತ್ತು ಯೋಜನಾ ನಿರ್ವಹಣೆ ಸಮಾಲೋಚಕರೊಂದಿಗೆ   ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ನಿಯತವಾಗಿ ಹಾಗೂ ನಿರಂತರವಾಗಿ ಸಭೆಗಳನ್ನು ನಡೆಸುವ ಮೂಲಕ    ನಿಗಾವಹಿಸಿ, ನಿಮ್ಮ ಹಂತದಲ್ಲೇ ಪರಿಹಾರ ಕ್ರಮಗಳನ್ನು ತೆಗೆದುಕೊಂಡು ದೂರಿಗೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾಗಬಹುದಾದ ಜನವಸತಿಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ತೀವ್ರ ನಿಗಾವಹಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 40 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿದ್ದು, ಇವುಗಳಲ್ಲಿ 23 ಯೋಜನೆಗಳು ಕೃಷ್ಣಾ ಹಾಗೂ ಭೀಮಾ ನದಿಯ ನೀರನ್ನು ಪರಿಗಣಿಸಿ ರೂಪಿಸಿಕೊಳ್ಳಲಾಗಿದೆ. 17 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯಗಳಡಿಯ ಕಾಲುವೆ ಆಧಾರಿತವಾಗಿರುತ್ತವೆ. 2025, ಮೇ 4 ರಿಂದ ನಾರಾಯಣಪೂರ ಜಲಾಶಯದ ಮೂಲಕ 1.50 ಟಿಎಂಸಿ ನೀರನ್ನು ಕಾಲುವೆ ಆಧಾರಿತ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ಹರಿಸಲಾಗುತ್ತಿದ್ದು, ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಜನ-ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವುದಕ್ಕೆ ಪೂರಕವಾಗಿ ಯೋಜನೆ ರೂಪಿಸಿಕೊಂಡು ನಿರ್ವಹಣೆ ಮಾಡಬೇಕು ಎಂದು ಸಭೆಯಲ್ಲಿನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಲಧಾರೆ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾದ ಯೋಜನೆಗಳಾದ ವಿಜಯಪುರ ಜಿಲ್ಲೆಯ ವಿಜಯಪುರ, ಇಂಡಿ ಮತ್ತು ಬಸವನ ಬಾಗೇವಾಡಿ ತಾಲೂಕುಗಳ 702 ಜನವಸತಿ ಹಾಗೂ 5 ಪುರಸಭೆಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಯ (DBOT Scheme-I) ಹಾಗೂ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನ 343 ಜನವಸತಿಗಳು ಹಾಗೂ 6 ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಡಿ (DBOT Scheme-II) ಕಾಮಗಾರಿಗಳನ್ನು      ಬೇಗ ಪೂರ್ಣಗೊಳಿಸುವ ನಿಟ್ಟಿನಲ್ಲಿ ಗುತ್ತಿಗೆದಾರರೊಂದಿಗೆ ಯೋಜನೆಯ ಅನುಷ್ಠಾನದ ಕುರಿತಾಗಿ  ವಿಸ್ತೃತ ಚರ್ಚೆ ನಡೆಸಿ, ಅಗತ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹೆಚ್ಚುವರಿ ಮಾನವ ಸಂಪನ್ಮೂಲ ಹಾಗೂ ಯಂತ್ರೋಕರಣಗಳನ್ನು ಬಳಸಿಕೊಂಡು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಬಿ. ಎಸ್. ಕುಂಬಾರ, ಜಿಲ್ಲೆಯ ಎಲ್ಲ ಉಪ-ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಶಾಖಾಧಿಕಾರಿಗಳು ಹಾಗೂ ಜಲಧಾರೆ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರು ಮತ್ತು ಯೋಜನಾ ನಿರ್ವಹಣೆ ಸಮಾಲೋಚಕರು ಹಾಗೂ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article