ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ರಾಜ್ಯದ 742 ಗ್ರಾಮಗಳಲ್ಲಿ ವಾಸಿಸುವ ಕನ್ನಡಿಗರ ಸಮಸ್ಯೆ ನಮ್ಮ ಸಮಸ್ಯೆ, ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿ, ಕನ್ನಡಿಗರು ವಾಸಿಸುವ ಗ್ರಾಮಗಳಲ್ಲಿ ಅಗತ್ಯವಿರುವ ರಸ್ತೆ, ನೀರು, ಬಸ್ ಸೌಕರ್ಯ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಭರವಸೆ ನೀಡಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ವಿಜಯಪುರ, ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಸೋಮವಾರ ಕರ್ನಾಟಕ ಸಂಭ್ರಮ-50, ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಕರ್ನಾಟಕ ಗಡಿ ಪ್ರಾಧಿಕಾರದ ಲಾಂಛನ ಬಿಡುಗಡೆಗೊಳಿಸಿದರು.
ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಇಂತಹ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದಕ್ಕೂ ಮುನ್ನ ಸಾಹಿತಿಗಳು ತಮ್ಮ ವಿಚಾರಗಳನ್ನು ಅಭಿವ್ಯಕ್ತಪಡಿಸಲು ಮುಕ್ತ ಅವಕಾಶವನ್ನು ನೀಡಿ ಮೈಸೂರಿನಲ್ಲಿ ಸಾಹಿತಿಗಳ ಚಿಂತನಾ ಸಮಾವೇಶ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಸ್ಪರ ಅನ್ಯೂನ್ಯ, ಪ್ರೀತಿ, ವಿಶ್ವಾಸ ಬೆಳೆಸಿ, ಉಭಯ ರಾಜ್ಯದ ಜನರು ಸಾಮರಸ್ಯದಿಂದ ಬದುಕಲು ಗಡಿಭಾಗದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಸಾಂಗ್ಲಿ ಜಿಲ್ಲೆಯ ಜತ್ತ ಶಾಸಕ ವಿಕ್ರಮಸಿಂಹ ಬಾಳಾಸಾಹೇಬ ಸಾವಂತ ಮಾತನಾಡಿದರು. ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕರಾದ ಸೋಮಣ್ಣ ಬೇವಿನಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶದಲ್ಲಿ ಕನ್ನಡ ಶಾಲೆ ವಿದ್ಯಾರ್ಥಿಗಳಿಗೆ ನಲಿ-ಕಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಿಂದ ಹೊರ ತಂದಿರುವ ಗಡಿಯಲ್ಲಿ ಭಾಷಾ ಸಾಮರಸ್ಯ ಪುಸ್ತಕ ಬಿಡುಗಡೆ ಮಾಡಲಾಯಿತು. 2023-24ನೇ ಸಾಲಿನ ಹಾಗೂ 2024-25ನೇ ಸಾಲಿನ ಗಡಿ ಪ್ರಾಧಿಕಾರದಿಂದ ನೀಡುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಬಾಲ ವಿಕಾಸ ಅಕಾಡೆಮಿಕ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷ ವಿಜುಗೌಡ ಪಾಟೀಲ, ಎಂ.ಎಸ್.ಮದಭಾವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಶಿಂಪೀರ ವಾಲೀಕಾರ, ಸೇರಿದಂತೆ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು, ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಧರಣಿದೇವಿ ಮಾಲಗತ್ತಿ ಸ್ವಾಗತಿಸಿದರು.