ಪ್ರಜಾಸ್ತ್ರ ಸುದ್ದಿ
ಮುಜಾಫರ್ ಪುರ: ಬಿಹಾರದಲ್ಲಿ ಮತದಾರರ ಅಧಿಕಾರ ಯಾತ್ರೆಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ತೇಜಸ್ವಿ ಯಾದವ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಗುಜರಾತ್ ಮಾದರಿ ಎಂದರೆ ಅಭಿವೃದ್ಧಿ ಅಲ್ಲ. ಮತ ಕಳ್ಳತನವೆಂದು ಬಿಜೆಪಿಯನ್ನು ತಿವಿದರು. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮತ ಕಳ್ಳತನ ಹೇಗೆ ಮಾಡಲಾಯಿತು ಎನ್ನುವುದಕ್ಕೆ ಇನ್ನಷ್ಟು ಸಾಕ್ಷಿಗಳನ್ನು ನೀಡುತ್ತೇನೆ ಎಂದರು.
ಬಿಹಾರದಲ್ಲಿ 65 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಿ ಹಾಕಲಾಗಿದೆ. ಇದರಲ್ಲಿ ಶ್ರೀಮಂತರ ಹೆಸರುಗಳಿಲ್ಲ. ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರ ಹೆಸರುಗಳಿವೆ. ಈ ಮೂಲಕ ಜನ ಸಾಮಾನ್ಯರ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇನ್ನು ಆಪರೇಷನ್ ಸಿಂಧೂರ ವಿಚಾರದಲ್ಲಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಸೂಚನೆಯ 5 ಗಂಟೆಯೊಳಗೆ ಪಾಕಿಸ್ತಾನ ವಿರುದ್ಧದ ಯುದ್ಧ ನಿಲ್ಲಿಸಲಾಗಿದೆ. ನನ್ನ ಮಧ್ಯಸ್ಥಿಕೆಯಿಂದಲೇ ಭಾರತ ಹಾಗೂ ಪಾಕ್ ಯುದ್ಧ ನಿಲ್ಲಿಸಲಾಗಿದೆ ಎಂದು ಟ್ರಂಪ್ ಪದೆಪದೆ ಹೇಳುತ್ತಿದ್ದಾರೆ. ಆದ್ರೆ, ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ ಎಂದು ಕಿಡಿ ಕಾರಿದರು.