ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ತೊದಲ್ನುಡಿ ಮಾಸಪತ್ರಿಕೆಯ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ ಎಸ್.ಎಸ್ ಟ್ಯೂಷನ್ ಅಂಗಳದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸರಸ್ವತಿ.ಆರ್ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ರಾಷ್ಟ್ರಪತಿಗಳಾದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಮತ್ತು ಡಾ.ವಿ.ವಿ ಗಿರಿ ಅವರ ಮೊಮ್ಮಗ ಡಾ.ಸುಬ್ರಮಣ್ಯಂ ಶರ್ಮಾ ಅವರು, ಮಕ್ಕಳೇ ದೇಶದ ಆಸ್ತಿ, ದೇಶದ ಒಳಿತಿಗಾಗಿ ಏಳ್ಗೆಗಾಗಿ ನೀವು ಏನೇ ಮಾಡಿದರು ನಿಮ್ಮೊಂದಿಗಿರುತ್ತೇನೆ. ಗುರು-ಶಿಷ್ಯರ ಬಾಂಧವ್ಯ ಎಲ್ಲಾ ಬಂಧಗಳಿಗಿಂತ ಮಿಗಿಲಾದದ್ದು. ಪ್ರತಿನಿತ್ಯ ಅಧ್ಯಾಪಕರ ದಿನಾಚರಣೆಯನ್ನಾಗಿಸಿ, ಅವರಿಗೆ ಗೌರವ ಸಲ್ಲಿಸಿ ಎಂದರು.
ಡಾ.ಸುಷ್ಮಾ ಶಂಕರ್ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಆರ್ಟ್ ಆಫ್ ಲಿವಿಂಗ್‌ನ ಆಚಾರ್ಯರಾದ ಆರ್.ಶ್ರೀನಿವಾಸ್, ಲೋಕ ಕೇರಳ ಸಭೆಯ ಸದಸ್ಯರಾದ ಕುಂಞಪ್ಪನ್, ಕೇಂಬ್ರಿಡ್ಜ್ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ರಾಕೇಶ್ ವಿ.ಎಸ್, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಮಲರ್ ವಿಳಿ ಕೆ ಸೇರಿ ಇತರರು ಉಪಸ್ಥಿತರಿದ್ದರು.