ಪ್ರಜಾಸ್ತ್ರ ಸುದ್ದಿ
ಕೆ.ಆರ್.ಪೇಟೆ(KR Pete): ತಾಲೂಕಿನ ಬೂಕನಕೆರೆ ಹೋಬಳಿಯ ದೊಡ್ಡಗಾಡಿಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮುವಾರ ಸಂಭ್ರಮದಿಂದ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಶಾಲೆ ಮುಖ್ಯ ಶಿಕ್ಷಕ ಹಳೆಯೂರು ಯೋಗೇಶ್ ಮಾತನಾಡಿ, ಮಕ್ಕಳಿಗೆ ಪಠ್ಯದಲ್ಲಿನ ಶಿಕ್ಷಣ ಕೊಡುವುದರ ಜತೆಗೆ ನಮ್ಮ ಕಲೆ, ಸಂಸ್ಕೃತಿ, ಹಬ್ಬ, ಹರಿದಿನಗಳು, ಆಚರಣೆಗಳ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಆಚರಣೆಗಳನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ನಮ್ಮದು ಪುಟ್ಟ ಶಾಲೆಯಾದರೂ ವಿಜೃಂಭಣೆಯಿಂದ ಸಂಕ್ರಾಂತಿ ಆಚರಿಸಿದ್ದೇವೆ ಎಂದು ತಿಳಿಸಿದರು.
ಶಾಲೆಯ ಅಂಗಳದಲ್ಲಿ ತಾವೇ ಬೆಳೆದ ಕಬ್ಬನ್ನು ಬಳಸಿ ವಿದ್ಯಾರ್ಥಿಗಳು ಸ್ವಾಗತ ಕಮಾನು ನಿರ್ಮಿಸಿದ್ದರು. ಶಾಲೆಯ ಆವರಣಕ್ಕೆ ಹಳ್ಳಿಕಾರ್ ಜೋಡಿ ಹೋರಿಗಳ ತಂದು ಸಲ್ಲಿಸಲಾಯಿತು. ಮತ್ತೊಂದೆಡೆ ಭತ್ತ-ರಾಗಿ ಧಾನ್ಯದ ರಾಶಿ ಹಾಕಿ ಪೂಜೆ ಸಲ್ಲಿಸಲಾಯಿತು. ಬಾಲಕಿಯರು ಸೀರೆ, ರವಿಕೆ, ಬಾಲಕರು ಪಂಚೆ, ಜುಬ್ಬಾ, ಟವೆಲ್ ಹಾಕಿಕೊಂಡು ಸಂಭ್ರಮಿಸಿದರು.
ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಪೋಷಕರೂ ಸುಗ್ಗಿಯ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಶಾಲೆಯ ಅಂಗಳದಲ್ಲಿ ಬಣ್ಣದ ರಂಗೋಲಿ ಬಿಡಿಸಿ ಅಲಂಕರಿಸಲಾಗಿತ್ತು. ಪೂಜೆಯ ನಂತರ ಎಳ್ಳು, ಬೆಲ್ಲ, ಕಬ್ಬು ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಎಸ್.ಡಿಎಂಸಿ ಅಧ್ಯಕ್ಷ ಡಿ.ಎಸ್ ಕಾಂತರಾಜು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರ್, ಜೆಡಿಎಸ್ ಮುಖಂಡ ಸುನಿಲ್, ಕುಮಾರ್, ಶಾಲಾ ಶಿಕ್ಷಕ ಯೋಗೀಶ್, ನಾಗರತ್ನ, ರಮ್ಯಾ, ಅರ್ಚಕ ಪ್ರಕಾಶ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪೋಷಕರು ಇದ್ದರು.




