ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮೈಸೂರು ನಗರಾಭಿವೃದ್ಧಿ(MUDA) ಪ್ರಾಧಿಕಾರದ ಹಗರಣ ದಿನದಿಂದ ದಿನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಂಕಷ್ಟಕ್ಕೆ ತರುತ್ತಿದೆ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲವೆಂದು ಸಿಎಂ ಹೇಳುತ್ತಲೇ ಇದ್ದಾರೆ. ಸರ್ಕಾರ ಬೀಳಿಸಲು ಬಿಜೆಪಿ, ಜೆಡಿಎಸ್ ರಾಜಭವನ ದುರ್ಬಳಕೆ, ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ಒಂದು ವೇಳೆ ಸಿಎಂ ರಾಜೀನಾಮೆ ನೀಡುವ ಪ್ರಸಂಗ ಬಂದರೆ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಕಸರತ್ತು ನಡೆದಿದೆ. ಸಿದ್ದರಾಮಯ್ಯ ಬಳಿಕ ಡಿ.ಕೆ ಶಿವಕುಮಾರ್ ಎಂದು ಹೇಳಲಾಗುತ್ತಿದೆ. ಆದರೆ, ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಡಿಕೆಶಿಗೆ(DK Shivakumar) ಮತ್ತೆ ಠಕ್ಕರ್ ಕೊಡಲು, ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಸ್ವಪಕ್ಷದಲ್ಲಿಯೇ ಪ್ಲಾನ್ ನಡೆದಿದ್ಯಾ ಎನ್ನುವ ಅನುಮಾನ ಮೂಡಿದೆ.
ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡಿರುವ ಸಹಕಾರ ಸಚಿವ ಕೆ.ಎನ್(KN Rajanna) ರಾಜಣ್ಣ, ಸಚಿವ ಸತೀಶ್(Satish Jarakiholi) ಜಾರಕಿಹೊಳಿ ಮುಂದಿನ ಸಿಎಂ ಆಗುವ ಸಾಧ್ಯತೆ ಇದೆ ಪರೋಕ್ಷವಾಗಿ ಹೇಳಿದ್ದಾರೆ. ನಮ್ಮ ಸಮುದಾಯದಲ್ಲಿ(ಎಸ್ಟಿ) ಸತೀಶ್ ಜಾರಕಿಹೊಳಿಗೆ ಭವಿಷ್ಯದಲ್ಲಿ ಅತ್ಯುನ್ನತ ಸ್ಥಾನ ಸಿಗುವ ಅವಕಾಶವಿದೆ ಎನ್ನುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ. ಅತ್ಯುನ್ನತ ಸ್ಥಾನ ಎಂದರೆ ಮುಖ್ಯಮಂತ್ರಿ ಆಗುವುದು ಎನ್ನುವುದು ಬಿಟ್ಟರೆ ಬೇರೆ ಇಲ್ಲ.
ಇನ್ನೊಂದು ಕಡೆ ಗೃಹ ಸಚಿವ ಪರಮೇಶ್ವರ್(G Parameshwar) ಅವರು ನನಗೆ ಪ್ರಮೋಷನ್ ಸಿಕ್ಕರೆ ಸಂತೋಷ ಎಂದಿದ್ದಾರೆ. ಈ ಹಿಂದಿನಿಂದಲೂ ಪರಮೇಶ್ವರ್ ಸಿಎಂ ಆಗಬೇಕು ಎನ್ನುವ ಕೂಗು ಇದೆ. ಅದನ್ನು ಸ್ವತಃ ಅವರು ಹೇಳಿದ್ದಾರೆ. ದಲಿತ ಸಮುದಾಯದಿಂದ ಮಲ್ಲಿಕರ್ಜುನ್ ಖರ್ಗೆ ಅವರಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ ಹಿರಿಯ ಅನುಭವಿ ನಾಯಕ ಪರಮೇಶ್ವರ್ ಅವರಿಗಾದರೂ ಸಿಗಲಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸ್ವತಃ ಪರಮೇಶ್ವರ್ ಅವರು ಬಡ್ತಿ ಸಿಕ್ಕರೆ ಸಂತೋಷ ಎನ್ನುವುದು ಸೇರಿದಂತೆ ಕೆಲ ಸಚಿವರ ಮಾತುಗಳನ್ನು ಕೇಳಿಸಿಕೊಂಡರೆ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುವ ಕೆಲಸ ನಡೆಯುತ್ತಿದೆ ಎನ್ನುವ ಸಂಶಯ ಮೂಡಿದೆ. ಒಂದು ವೇಳೆ ಸಿದ್ದರಾಮಯ್ಯನವರ ಕುರ್ಚಿಗೆ ಸಂಚುಕಾರ ಬಂದರೆ ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ ಎಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದು ಅಷ್ಟೇ ಸತ್ಯ. ಹೀಗಾಗಿಯೇ ಬಿಜೆಪಿ-ಜೆಡಿಎಸ್ ಟಾರ್ಗೆಟ್ ಮಾಡಿರುವುದು ಸಿದ್ದರಾಮಯ್ಯನವರನ್ನು ಎನ್ನುವುದು ಸ್ಪಷ್ಟ.