ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಥಗ್ ಲೈಫ್ ಚಿತ್ರದ ಈವೆಂಟ್ ಸಂದರ್ಭದಲ್ಲಿ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ವಿರುದ್ಧ ಹೈಕೋರ್ಟ್ ಸಹ ಕಿಡಿ ಕಾರಿದೆ. ಜನರ ಭಾವನೆಗಳಿಗೆ ನೋವು ಮಾಡಿರುವ ನಟ ಕಮಲ್ ಹಾಸನ್ ಅವರಿಗೆ ಕ್ಷಮೆ ಕೇಳಲು ಹಿಂಜರಿಕೆ ಯಾಕೆ ಎಂದು ಪ್ರಶ್ನಿಸಿದೆ.
ಇನ್ನು ಸಿನಿಮಾ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಜೂನ್ 10ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಜೂನ್ 5ರಂದು ಚಿತ್ರ ಬಿಡುಗಡೆಗೆ ನಿರ್ಮಾಪಕರು ನಿರ್ಧರಿಸಿದ್ದರು. ಈಗ ಕೋರ್ಟ್ ಅಂಗಳದಲ್ಲಿ ಇರುವುದರಿಂದ ಬಿಡುಗಡೆ ದಿನಾಂಕ ಮುಂದೂಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆಗೆ ಸಿನಿಮಾ ನಿರ್ಮಾಪಕರು ಚರ್ಚೆ ನಡೆಸಲಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.