ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಜಿಲ್ಲೆಯ ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥಸಂಚಲನಕ್ಕೆ ಕುರಿತಂತೆ ಇನ್ನೊಂದು ಶಾಂತಿ ಸಭೆ ನಡೆಸುವಂತೆ ಕರ್ನಾಟಕ ಹೈಕೋರ್ಟಿನ ಕಲಬುರಗಿ ಪೀಠ ಸೂಚನೆ ನೀಡಿದೆ. ನವೆಂಬರ್ 5ರಂದು ಇನ್ನೊಂದು ಶಾಂತಿ ಸಭೆ ನಡೆಸುವಂತೆ ಸೂಚಿಸಿ ನವೆಂಬರ್ 7ಕ್ಕೆ ವಿಚಾರಣೆಯನ್ನು ಮುಂದೂಡಿದೆ. ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರು ಅರ್ಜಿಯ ವಿಚಾರಣೆಯನ್ನು ನಡೆಸಿದರು.
ಶಾಂತಿಸಭೆಯಲ್ಲಿ ಅರ್ಜಿದಾರರು ಭಾಗವಹಿಸಿರಲಿಲ್ಲ ಎಂದು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಅರ್ಜಿದಾರ ಪರ ವಕೀಲ ಅರುಣ್ ಶ್ಯಾಮ್ ಅವರು, ಅರ್ಜಿದಾರರ ಸಬ್ಬಂದಿ ಮೃತಪಟ್ಟಿದ್ದರಿಂದ ಶಾಂತಿ ಸಭೆಯಲ್ಲಿ ಭಾಗವಹಿಸಿರಲಿಲ್ಲವೆಂದು ಹೇಳಿದರು. ಶಾಂತಿ ಸಭೆಯ ಗಂಭೀರತೆಯನ್ನು ಅರ್ಜಿದಾರರು ಯಾಕೆ ಅರಿತುಕೊಳ್ಳಲಿಲ್ಲ ಎಂದು ಕೋರ್ಟ್ ಪ್ರಶ್ನಿಸಿತು. ಇನ್ನೊಂದು ಸಭೆ ನಡೆಸಿದರೆ ಅರ್ಜಿದಾರರು ಭಾಗವಹಿಸುತ್ತಾರೆ ಎಂದು ವಕೀಲರು ಹೇಳಿದರು. ಇದಕ್ಕೆ ಎದುರಾಳಿ ವಕೀಲರನ್ನು ಪ್ರಶ್ನಿಸಿದ್ದು, ತಮ್ಮದೇನು ತಕರಾರು ಇಲ್ಲ. ಇನ್ನೊಂದು ಸಭೆ ನಡೆಸಬಹುದು ಎಂದರು.
ನವೆಂಬರ್ 5ರ ಸಂಜೆ 5 ಗಂಟೆಗೆ ಇನ್ನೊಂದು ಶಾಂತಿ ಸಭೆ ನಡೆಯಬೇಕು. ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಸಲಹೆ ನೀಡಿತು. ಸಭೆಯಲ್ಲಿ ಸರ್ಕಾರದ ಪರ ವಕೀಲರು, ಅರ್ಜಿದಾರ ಪರ ವಕೀಲರು, ಜಿಲ್ಲಾಧಿಕಾರಿ ಭಾಗವಹಿಸಬೇಕು ಎಂದು ನಿರ್ದೇಶನ ನೀಡಿದೆ.




