ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹುಬ್ಬಳ್ಳಿಯಲ್ಲಿ ಐದು ವರ್ಷದ ಮಗುವಿನ ಮೇಲೆ ದೌರ್ಜನ್ಯ, ಕೊಲೆ ಪ್ರಕರಣ ಸಂಬಂಧ ಬಿಹಾರ ಮೂಲದ ರಿತೇಶ್ ಕುಮಾರ್ ಎಂಬಾತನ ಎನ್ ಕೌಂಟರ್ ಆಗಿದೆ. ಈ ಪ್ರಕರಣದ ಬಗ್ಗೆ ಸೋಮವಾರ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಅಪರಾಧಿ ಪ್ರಕರಣಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚುತ್ತಿರುವ ಸಂಬಂಧ ಕಾರ್ಮಿಕ ಇಲಾಖೆ ಸಚಿವರೊಂದಿಗೆ ಸಭೆ ನಡೆಸುತ್ತೇನೆ. ರಾಜ್ಯಕ್ಕೆ ಬರುವ ಕಾರ್ಮಿಕರನ್ನು ಬಲವಂತವಾಗಿ ತಡೆಯಲು ಸಾಧ್ಯವಿಲ್ಲ. ಅಪರಾಧಿ ಕೃತ್ಯಗಳನ್ನು ಗಮನಿಸಿ ಕ್ರಮ ತೆಗೆದುಕೊಳ್ಳಬಹುದು ಎಂದರು.
ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಗೆ ವಲಸೆ ಕಾರ್ಮಿಕರು ಬರುತ್ತಾರೆ. ಹಲವು ಸಂದರ್ಭದಲ್ಲಿ ಅಪರಾಧಿ ಕೃತ್ಯಗಳನ್ನು ಭಾಗಿಯಾಗಿರುವುದನ್ನು ನಾವು ನೋಡುತ್ತೇವೆ. ಈ ಬಗ್ಗೆ ಕಾರ್ಮಿಕ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ. ಅಪರಾಧಿ ಕೃತ್ಯಗಳನ್ನು ತಡೆಯುವುದು ಹೇಗೆ, ಅಂತವರ ವಿರುದ್ಧ ತೆಗೆದುಕೊಳ್ಳಬಹುದಾದ ಕ್ರಮಗಳು ಏನು ಅನ್ನೋದರ ಕುರಿತು ಚರ್ಚಿಸುತ್ತೇವೆ. ಇನ್ನು ಹುಬ್ಬಳ್ಳಿ ಪ್ರಕರಣದ ಸತ್ಯಾಂಶ ಹೊರ ಬರಲು ತನಿಖೆಗೆ ಆದೇಶಿಸಿದ್ದೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.