Ad imageAd image

ಮೂರು ತಿಂಗಳಿನಲ್ಲಿ 545 ಪಿಎಸ್ಐ ಹುದ್ದೆಗಳ ಭರ್ತಿ: ಗೃಹ ಸಚಿವ ಪರಮೇಶ್ವರ್

Nagesh Talawar
ಮೂರು ತಿಂಗಳಿನಲ್ಲಿ 545 ಪಿಎಸ್ಐ ಹುದ್ದೆಗಳ ಭರ್ತಿ: ಗೃಹ ಸಚಿವ ಪರಮೇಶ್ವರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ಈಗಾಗಲೆ ಅಭ್ಯರ್ಥಿಗಳ ತರಬೇತಿ ನಡೆಯುತ್ತಿದ್ದು, ಮೂರು ತಿಂಗಳ ಒಳಗಾಗಿ ಖಾಲಿ ಇರುವ ಸ್ಥಳಗಳಲ್ಲಿ ಪಿಎಸ್‍ಐ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿ ಅವರು ಮಾತನಾಡಿದರು.

ಮೂಡಬಿದ್ರೆ, ಮುಲ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಒದಗಿಸಿಕೊಡುವ ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಶಾಸಕ ಉಮಾನಾಥ್ ಅವರು ಪ್ರಶ್ನೆ ಸಲ್ಲಿಸಿದ್ದರು. ಗೃಹ ಸಚಿವ ಜಿ.ಪರಮೇಶ್ವರ್ ಅವರು ಉತ್ತರ ನೀಡಿ,  ಕಳೆದ ಐದು ವರ್ಷಗಳಿಂದಲೂ ಪಿಎಸ್‍ಐಗಳ ನೇಮಕಾತಿ ಆಗಿಲ್ಲ. ಈ ಹಿಂದೆ 545 ಪಿಎಸ್ಐ ಹುದ್ದೆಗಳ ನೇಮಕಾತಿಗಾಗಿ ನಡೆದಂತಹ ಪ್ರಕರಣವನ್ನು ಬಗೆಹರಿಸಿ, ನೇಮಕಾತಿ ಮಾಡಿದ್ದು ಆಯ್ಕೆಯಾದ ಅಭ್ಯರ್ಥಿಗಳನ್ನು ತರಬೇತಿಗಾಗಿ ನಿಯೋಜಿಸಲಾಗಿದೆ.  ಮೂರು ತಿಂಗಳಲ್ಲಿ ತರಬೇತಿ ಪೂರ್ಣಗೊಳ್ಳಲಿದ್ದು, ಬಳಿಕ ಖಾಲಿ ಇರುವೆಡೆ, ಅಗತ್ಯ ಇರುವ ಕಡೆಗಳಲ್ಲಿ ಭರ್ತಿ ಮಾಡಲಾಗುವುದು. ಪೊಲೀಸ್ ಕಾನ್ಸ್‍ಟೇಬಲ್‍ಗಳ ನೇಮಕಾತಿಗಾಗಿಯೂ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯಾಗಿ ಬಂದ ಬಳಿಕ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.

ಕರಾವಳಿ ಮುಂತಾದೆಡೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯ ಪಡೆಯನ್ನು ನೇಮಿಸಿದ್ದೇವೆ.  ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ನಾವು ಜಾರಿ ಮಾಡಿದ್ದು, 50 ಮನೆಗೆ ಒಂದು ಕ್ಲಸ್ಟರ್‍ನಂತೆ ಮಾಡಿ, ಪೊಲೀಸ್ ಕಾನ್ಸ್‍ಟೇಬಲ್ ಅವರು ಮನೆ ಮನೆಗೆ ಭೇಟಿ ನೀಡಿ, ಆಯಾ ಮನೆಗಳಲ್ಲಿನ ಕುಟುಂಬಗಳಿಂದ ಸಮಸ್ಯೆಗಳ ಬಗ್ಗೆ ನಿಗದಿತ ಪ್ರಶ್ನೆಗಳನ್ನು ಕೇಳಿ ವಿವರ ಪಡೆದು, ಕ್ರಮ ವಹಿಸಿದ್ದು, ಇದು ಜನರಿಂದಲೂ ಪ್ರಶಂಸೆಗೆ ಒಳಗಾಗಿದೆ. ಇದರ ಜೊತೆಗೆ ಮಹಿಳೆಯರ ಸುರಕ್ಷತೆಗಾಗಿಯೇ ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಕ್ಕ ಪಡೆ ರಚಿಸಲಾಗುತ್ತಿದ್ದು, ಇದೂ ಕೂಡ ಮೆಚ್ಚುಗೆ ಪಡೆದುಕೊಂಡಿದೆ. ರಾಜ್ಯದಲ್ಲಿ ಇದರಿಂದ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತಿದೆ. ವಿಶೇಷವಾಗಿ ಕರಾವಳಿ ಪ್ರದೇಶವನ್ನು ಸುರಕ್ಷಿತ ಪ್ರದೇಶವಾಗಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು ಎಂದು ಹೇಳಿದರು.

WhatsApp Group Join Now
Telegram Group Join Now
Share This Article