ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹಳೇ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಪ್ರಕರಣವನ್ನು ಹಿಂದಕ್ಕೆ ಪಡೆದಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದೆ. ಕಮಲ ನಾಯಕರು ಕಿಡಿ ಕಾರುತ್ತಿದ್ದಾರೆ. ಈ ಬಗ್ಗೆ ಸೋಮವಾರ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ನಮ್ಮ ಮುಂದೆ 56 ಪ್ರಕರಣಗಳು ಬಂದಿದ್ದವು. ಅದರಲ್ಲಿ 43 ಪ್ರಕರಣಗಳನ್ನು ವಾಪಸ್ ಪಡೆದಿದ್ದೇವೆ. ಇದರಲ್ಲಿ ಬರೀ ಅಲ್ಪಸಂಖ್ಯಾತರು ಇಲ್ಲ. ರೈತರು, ಸಾಮಾನ್ಯ ಜನರು, ವಿದ್ಯಾರ್ಥಿಗಳಿದ್ದಾರೆ ಎಂದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಬರೀ ಹುಬ್ಬಳ್ಳಿ ಪ್ರಕರಣ ಹಿಂದಕ್ಕೆ ಪಡೆದಿದ್ದರೆ ಅಥವ 43 ಪ್ರಕರಣಗಳು ಅಲ್ಪಸಂಖ್ಯಾತರಿಗೆ ಸೇರಿದವುಗಳಾಗಿದ್ದರೆ ಬಿಜೆಪಿಯವರ ಆರೋಪ ಒಪ್ಪಿಕೊಳ್ಳಬಹುದಿತ್ತು. ಪ್ರಕರಣಗಳನ್ನು ವಾಪಸ್ ಪಡೆಯಲು ಪ್ರಕ್ರಿಯೆಗಳಿವೆ. ಸುಳ್ಳು ಪ್ರಕರಣ, ಪೂರಕ ಸಾಕ್ಷಿಗಳು ಇಲ್ಲದಿರುವುದು, ಘಟನೆ ಬೇರೆ ದಾಖಲಾಗಿರುವ ಪ್ರಕರಣ ಬೇರೆಯಾಗಿದೆ ಎಂದು ಮನವಿ ಸಲ್ಲಿಸಿರುತ್ತಾರೆ. ಇದಕ್ಕಾಗಿ ಉಪ ಸಮಿತಿ ರಚಿಸಲಾಗಿರುತ್ತೆ. ಇದಕ್ಕೆ ಗೃಹ ಸಚಿವರು ಅಧ್ಯಕ್ಷರು ಇರುತ್ತಾರೆ. ಈ ಕುರಿತು ಪರಿಶೀಲನೆಗೆ ಪೊಲೀಸ್ ಠಾಣೆಗಳಿಗೆ ಕಳಿಸಲಾಗಿರುತ್ತೆ. ನಂತರ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತೆ ಅಂತಾ ಹೇಳಿದರು.
ಬಿಜೆಪಿ ಆಡಳಿತದಲ್ಲಿಯೂ ಇಂತಹ ಪ್ರಕರಣಗಳಾಗಿವೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಆಗಿವೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧದ ಪ್ರಕರಣವನ್ನು ಸಿಎಂ ಸ್ಥಾನದಲ್ಲಿದ್ದುಕೊಂಡೆ ವಾಪಸ್ ಪಡೆದಿದ್ದಾರೆ. ಬಿಜೆಪಿಯವರು ಸಕಾರಾತ್ಮಕವಾಗಿ ವಿರೋಧಿಸಿದರೆ ಒಪ್ಪಿಕೊಳ್ಳಬಹುದು. ವಿರೋಧ ಪಕ್ಷದಲ್ಲಿದ್ದಾಗ ನಾವು ಅನೇಕ ಸಲಹೆಗಳನ್ನು ನೀಡಿದ್ದೇವೆ. ಅವರು ನಮಗೆ ಸಲಹೆ ನೀಡಲಿ ಅಂತಾ ಹೇಳಿದರು.