ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬಿರುಗಾಳಿ ಎಬ್ಬಿಸಿರುವ ಹನಿ ಟ್ರ್ಯಾಪ್ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಇದನ್ನು ಶೀಘ್ರದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ವಿನಯ್ ಕುಮಾರ್ ಸಿಂಗ್ ಎಂಬುವರು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಹನಿಟ್ರ್ಯಾಪ್ ಪ್ರಕರಣ ಸದನದಲ್ಲಿಯೂ ಚರ್ಚೆಯಾಗಿದೆ. ಬರೋಬ್ಬರಿ 48 ಜನಪ್ರತಿನಿಧಿಗಳಿಗೆ ಈ ಗಾಳ ಬೀಸಲಾಗಿದೆಯಂತೆ. ಸಚಿವ ಕೆ.ಎನ್ ರಾಜಣ್ಣ ಇದನ್ನು ಪ್ರಸ್ತಾಪಿಸಿದ್ದು, ತಮಗೆ ಹಾಗೂ ತಮ್ಮ ಮಗನಿಗೆ ಹನಿ ಟ್ರ್ಯಾಪ್ ಮಾಡಲು ಯತ್ನಿಸಿದ್ದರು. ಅವರ ಕಪಾಳಕ್ಕೆ ಬಾರಿಸಿದ್ದೇನೆ ಎಂದು ಹೇಳಿದ ಬಳಿಕ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾಗುವ ಹಂತಕ್ಕೆ ಬಂದಿದೆ. ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.