Ad imageAd image

ಗ್ಯಾರೆಂಟಿ ಯೋಜನೆಗಳಿಂದ ಫಲಾನುಭವಿಗಳ ಬದುಕಲ್ಲಿ ಭರವಸೆ: ಎಂ.ಬಿ ಪಾಟೀಲ

ಸಾಮಾಜಿಕ ನ್ಯಾಯ, ಶೈಕ್ಷಣಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಒಳಗೊಂಡಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿರುವ ನಮ್ಮ ಸರ್ಕಾರವು ಮುಖ್ಯಮಂತ್ರಿ

Nagesh Talawar
ಗ್ಯಾರೆಂಟಿ ಯೋಜನೆಗಳಿಂದ ಫಲಾನುಭವಿಗಳ ಬದುಕಲ್ಲಿ ಭರವಸೆ: ಎಂ.ಬಿ ಪಾಟೀಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಸಾಮಾಜಿಕ ನ್ಯಾಯ, ಶೈಕ್ಷಣಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಒಳಗೊಂಡಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿರುವ ನಮ್ಮ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನಪರ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ(MB Patil) ಹೇಳಿದರು.

ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ದೇಶದಾದ್ಯಂತ ಸಂಚಲನ ಉಂಟುಮಾಡಿರುವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಬದುಕಿನಲ್ಲಿ ಬೆಳಕು ಮತ್ತು ಭರವಸೆ ತುಂಬುವಲ್ಲಿ ಸಫಲವಾಗಿವೆ. ವಿಜಯಪುರ ನಗರದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಅನುಮೋದನೆಯಾಗಿದ್ದು, ಸರ್ಕಾರದಿಂದ 49 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆಯಾಗಿದೆ. ಅಂದಾಜು ಪತ್ರಿಕೆ ಅನುಮೋದನೆ ಪಡೆದುಕೊಂಡು ಅತೀ ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಸಿ.ಎಸ್.ಆರ್ ಅನುದಾನದಲ್ಲಿ ವಿಜಯಪುರ ನಗರದಲ್ಲಿರುವ ತಾಜ್‌ಬಾವಡಿ, ಗೋಲಗುಮ್ಮಟ್, ಬಬಲೇಶ್ವರ ತಾಲೂಕಿನಲ್ಲಿರುವ ಮಮದಾಪುರ ಕೆರೆ ಮತ್ತು ಅದರ ಸುತ್ತಲಿನ ಅರಣ್ಯ ಪ್ರದೇಶ, ಕುಮಟಗಿಯಲ್ಲಿರುವ ಬೇಸಿಗೆ ಅರಮನೆ, ಕಪ್ಪು ತಾಜ್‌ಮಹಲ್ ಎಂದು ಪ್ರಸಿದ್ಧಿಯಾಗಿರುವ ಇಬ್ರಾಹಿಂ ರೋಜಾ ಹಾಗೂ ಇನ್ನಿತರ ಸ್ಮಾರಕಗಳನ್ನು ಮತ್ತು ಅವುಗಳ ಆವರಣದಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಸೌಂದರ್ಯೀಕರಣಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಲ್ಲಿ 7 ಜನರು ದುರಂತಕ್ಕೀಡಾಗಿದ್ದು ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ. ಮಳೆಯ ಅನಾಹುತದಿಂದಾಗಿ 95 ಜಾನುವಾರುಗಳ ಜೀವಹಾನಿಯಾಗಿದ್ದು, 15 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. 129.20 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದು ಇದಕ್ಕಾಗಿ 323 ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು. ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ  18 ಕೋಟಿ ರೂಪಾಯಿ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.

ಈ ವೇಳೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಹಾನಗರ ಪಾಲಿಕೆ ಮಹಾಪೌರರಾದ ಮಹೇಜಬಿನ್ ಅಬ್ದುಲರಜಾಕ ಹೊರ್ತಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಅಬ್ದುಲ್ ಹಮೀದ್ ಮುಶ್ರೀಫ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

WhatsApp Group Join Now
Telegram Group Join Now
Share This Article