ಪ್ರಜಾಸ್ತ್ರ ಸುದ್ದಿ
ಹೊಸಪೇಟೆ(Hosapete): ಕಳೆದ ನಾಲ್ಕು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ 17 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ ಯುವಕನೊಬ್ಬ ಸ್ನೇಹಿತರ ಜೊತೆಗೆ ಕೂಡಿಕೊಂಡು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಂಜುನಾಥ, ತರುಣ್ ಹಾಗೂ ಅಕ್ಬರ್ ಕೊಲೆ ಆರೋಪಿಗಳಾಗಿದ್ದು, ಇನ್ನೊಬ್ಬರು ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಪ್ಪರದಹಳ್ಳಿಯ ಬಾಲಕಿಯನ್ನು ಹೊಸಪೇಟೆ ನಗರದ ನೇಕಾರ ಕಾಲೋನಿ ನಿವಾಸಿ ಮಂಜುನಾಥ(24) ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದ. ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಹುಡುಗನ ತಾಯಿ ಲಕ್ಷ್ಮಿ ಇದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ದೈಹಿಕ, ಮಾನಸಿಕ ಹಿಂಸೆ ನೀಡಲು ಶುರು ಮಾಡಿದ್ದಾನೆ. ಅಲ್ಲದೆ ಎರಡು ತಿಂಗಳ ಹಿಂದೆ ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಕೊಲೆ ಮಾಡಿ ಮುನಿರಾಬಾದ್ ಸೇತುವೆ ಹತ್ತಿರ ಹೂತು ಹಾಕಿದ್ದಾರೆ.
ಇಂತಹದೊಂದು ಕೃತ್ಯ ನಡೆದಿರುವ ಬಗ್ಗೆ ಎಲ್ಲಿಯೂ ತಿಳಿದು ಬಂದಿಲ್ಲ. ಮೂವರು ಆರೋಪಿಗಳಲ್ಲಿ ಒಬ್ಬ ಎರಡು ದಿನಗಳ ಹಿಂದೆ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ಆಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ಆರೋಪಿಗಳು ತೋರಿಸಿದ ಜಾಗದಲ್ಲಿ ಹೊಸಪೇಟೆ ಠಾಣೆ ಪೊಲೀಸರು ನೆಲ ಅಗೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಗುರುತು ಪತ್ತೆಗಾಗಿ ಡಿಎನ್ಎ ಪರೀಕ್ಷೆ ನಡೆಸುವ ಸಾಧ್ಯತೆಯಿದೆ.