ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಜನಾರ್ದನ್ ರೆಡ್ಡಿ ಅವರಿಗೆ ಸೇರಿದ ಮಾಡೆಲ್ ಹೌಸ್(ಮಾದರಿ ಮನೆ)ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಜಿ ಸ್ಕ್ವೇರ್ ಬಡಾವಣೆಯಲ್ಲಿರುವ ಮಾದರಿ ಮನೆಗೆ ಬೆಂಕಿ ಹಚ್ಚಲಾಗಿದ್ದು, ಅಪ್ರಾಪ್ತರು ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ ಎಂದು ಬಳ್ಳಾರಿ ವಲಯ ಐಜಿಪಿ ಡಾ.ಪಿ.ಎಸ್ ಹರ್ಷ ಶನಿವಾರ ಮುಂಜಾನೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆ ಈ ಒಂದು ಘಟನೆ ನಡೆದಿದೆ. ಸೋಫಾ ಸೆಟ್ ಗಳು, ಕಿಚನ್ ಸೆಟ್ ಗಳು, ಟಿವಿ, ಚೇರ್, ಎಸಿ ಸೇರಿದಂತೆ 1.25 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಜಿ ಸ್ವ್ಕೇರ್ ಬಡಾವಣೆಯ ಸೈಟ್ ಎಂಜಿನಿಯರ್ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾತ್ರಿಯೇ ಎಫ್ಐಆರ್ ದಾಖಲಾಗಿದೆ.
ಸುಮಾರು 80 ಎಕರೆ ವಿಸ್ತೀರ್ಣದಲ್ಲಿ ರುಕ್ಮಣಮ್ಮ ಚೆಂಗಾರೆಡ್ಡಿ(ಜಿ ಸ್ಕ್ವೇರ್) ಬಡಾವಣೆ ಶ್ರೀರಾಮುಲು ಹಾಗೂ ಜನಾರ್ದನ್ ರೆಡ್ಡಿ ಒಡೆತನದಲ್ಲಿದೆ. 60X50 ವಿಸ್ತೀರ್ಣದಲ್ಲಿ ವಿಲ್ಲಾ ಮಾದರಿಯ ಮನೆಯನ್ನು 4 ಕೋಟಿ ರೂಪಾಯಿ ವೆಚ್ಚದಲ್ಲಿ 2011ರಲ್ಲಿ ನಿರ್ಮಿಸಿದ್ದರು. ಇಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಈ ಬಡಾವಣೆಯಲ್ಲಿ ನಿವೇಶನ ಖರೀದಿಸುವ ಜನರಿಗೆ ಈ ಮನೆಯ ಮಾದರಿ ತೋರಿಸಲಾಗುತ್ತಿತ್ತು. ಬೆಂಕಿ ಅನಾಹುತದ ಬಗ್ಗೆ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ಅವರು ಬರುವಷ್ಟರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಸ್ತುಗಳು ಸುಟ್ಟು ಹೋಗಿದ್ದವು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಜನಾರ್ದನ್ ರೆಡ್ಡಿ ಸಹೋದರ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಆರೋಪ ಮಾಡಿದ್ದಾರೆ.




