ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ರಂಜಾನ್ ಸಾಮೂಹಿಕ ಪ್ರಾರ್ಥನೆಯ ವೇಳೆ ಕೆಲ ಕಿಡಗೇಡಿಗಳು ಆರ್ ಎಸ್ಎಸ್ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿದ್ದು, ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಉಪ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಪಿಎಂಸಿ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಂಡು ಹಿಂತಿರುಗುವ ವೇಳೆ ಎಸ್ ಡಿಪಿಐ ಕಾರ್ಯಕರ್ತ ಅಬ್ದುಲ್ ಗಪೂರ್ ಕುರಹಟ್ಟಿ ಎಂಬಾತ ಮತ್ತು ಆತನ ಸಹಚರರು ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ಯಾಲಿಸ್ತಾನಿ ಧ್ವಜ ಹಿಡಿದುಕೊಂಡು, ಶಾಂತಿ ಭಂಗ ಮಾಡಲು ಯತ್ನಿಸಿದ್ದರು. ಅಲ್ಲದೆ, ‘ದೇಶವನ್ನು, ಮನಸ್ಸನ್ನು ಒಡೆದವರು ಮುಸ್ಲಿಮರ ಆಸ್ತಿಗೆ ಕಣ್ಣು ಹಾಕಿದ್ದಾರೆ ಹಾಗೂ ಬ್ರಿಟಿಷರ ವಿರುದ್ಧ ಸಮರ ಸಾರಿದ ಮುಸ್ಲಿಮರಿಗೆ ಜುಜುಬಿ ಸಂಘ ಪರಿವಾರ ಅದ್ಯಾವ ಲೆಕ್ಕ’ ಎಂಬ ಪ್ಲೇ ಕಾರ್ಡ್ ಪ್ರದರ್ಶಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಮಾಜದಲ್ಲಿ ಬೇರೆ ಬೇರೆ ಧರ್ಮದ, ಜನಾಂಗದವರ ಮೇಲೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಉಂಟು ಮಾಡುವ ವದಂತಿಯನ್ನು ಹಬ್ಬಿಸಿ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಮತ್ತು ಸಮಾಜದಲ್ಲಿ ಶಾಂತಿ ಭಂಗವನ್ನುಂಟು ಮಾಡಲು ಉದ್ದೇಶಪೂರ್ವಕವಾಗಿ ಹಿಂದೂ ಕೋಮಿನ ಜನರಿಗೆ ಉದ್ರೇಕಿಸಿದ್ದು, ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಿವಂತೆ ರಘು ಯಲ್ಲಕ್ಕನವರ ದೂರು ನೀಡಿದ್ದಾರೆ. ಈ ಸಂಬಂಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಉಪ ನಗರ ಪೊಲೀಸ್ ಠಾಣೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.