ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರು ಮೂತ್ರಕೋಶದ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಜನವರಿ 26ರಂದು ತಾಯ್ನಾಡಿಗೆ ವಾಪಸ್ ಆಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರಂತೆ.
ವಿಮಾನ ನಿಲ್ದಾಣದಿಂದಲೇ ಭರ್ಜರಿಯಾಗಿ ಸ್ವಾಗತಿಸುವ ಪ್ಲಾನ್ ಮಾಡಲಾಗಿದ್ದು, ಇದರ ಜೊತೆಗೆ ಅವರ ಮನೆಯ ಮುಂದೆಯೂ ಸಹ ಅಭಿಮಾನಿಗಳು ಸೇರಿ ನೆಚ್ಚಿನ ನಟನನ್ನು ಪ್ರೀತಿಯಿಂದ ಸ್ವಾಗತಿಸಲಿದ್ದಾರಂತೆ. ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ಕನ್ನಡದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಗುಣಮುಖರಾಗಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಫ್ಯಾನ್ಸ್ ಸಂಭ್ರಮ ಹೆಚ್ಚಾಗಿದೆ.