Ad imageAd image

ಪರೋಪಕಾರಕ್ಕೆ ಮನುಷ್ಯ ಜೀವನ ಬಳಸಿಕೊಳ್ಳಬೇಕು: ಡಾ.ಪ್ರಶಾಂತ ಕಟಕೋಳ

Nagesh Talawar
ಪರೋಪಕಾರಕ್ಕೆ ಮನುಷ್ಯ ಜೀವನ ಬಳಸಿಕೊಳ್ಳಬೇಕು: ಡಾ.ಪ್ರಶಾಂತ ಕಟಕೋಳ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜೀವನವನ್ನು ನಮ್ಮ ಹಿರಿಯರು ಹೇಳುವಂತೆ ಅರ್ಥಪೂರ್ಣ, ಸದುದ್ದೇಶಿಸಿತ, ತೃಪ್ತಿಕರ ಹಾಗೂ ಸಂಪೂರ್ಣವಾಗಿರಬೇಕು ಎಂದು ಡಾ.ಪ್ರಶಾಂತ ಕಟಕೋಳ ಹೇಳಿದರು. ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದಲ್ಲಿ ನಾಲ್ಕನೇ ಗೋಷ್ಠಿ “ಯೋಗ ಜೀವನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಇತರರಿಗೆ ಎಷ್ಟು ಉಪಯುಕ್ತವಾಗಿದ್ದಾನೆ ಎನ್ನುವುದರ ಮೇಲೆ ಆತನ ಜೀವನದ ಮೌಲ್ಯ ತಿಳಿಯುತ್ತದೆ. ಹೊರತು ಆತ ಎಷ್ಟು ಹಣ ಮಾಡಿದ್ದಾನೆ, ಎಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎನ್ನುವುದರ ಮೇಲೆ ಅಲ್ಲ. ಮನುಷ್ಯ ತನ್ನ ಸ್ವಹಿತಕ್ಕಾಗಿ ಬಳಸುವುದನ್ನು ಕಾಮ ಎಂದು ಕರೆಯಲಾಗಿದೆ. ಪರರ ಉಪಯೋಗಕ್ಕಾಗಿ ಬಳಸುವುದನ್ನು ಮೋಕ್ಷ ಎನ್ನಲಾಗಿದೆ ಹಾಗಾಗಿ ನಾವು ಪರೋಪಕಾರಿ ಜೀವನವನ್ನು ಅಳವಡಿಸಿಕೊಂಡು ಬದುಕು ಸುಂದರಗೊಳಿಸಿಕೊಳ್ಳಬೇಕು ಎಂದರು.

ಮನಸ್ಸಿನಲ್ಲಿ ಜ್ಞಾನಿ ಮತ್ತು ಅಜ್ಞಾನಿಗಳ ವಾಸವಿರುತ್ತದೆ. ನಮ್ಮ ತಲೆಯೊಳಗೆ ಎಲ್ಲವನ್ನು ಹಾಕಿಕೊಳ್ಳಬಾರದು. ನಮಗೆ ಯಾವುದು ಅವಶ್ಯವೋ ಅದನ್ನು ಮಾತ್ರ ತಲೆಯೊಳಗೆ ಹಾಕಿಕೊಳ್ಳಬೇಕು. ಅದಕ್ಕಾಗಿ ನಮಗೆ ಜ್ಞಾನ ಅವಶ್ಯ. ಆ ಜ್ಞಾನವನ್ನು ನಾವು ವಿದ್ಯಾರ್ಥಿ ಜೀವನದಲ್ಲಿ ಸಂಪಾದಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆ ಅತೀ ಮುಖ್ಯವಾಗುತ್ತದೆ. ಕಾಮ, ಕ್ರೋಧ, ಮಧ ಮೋಹವನ್ನು ಮನಸ್ಸಿನಿಂದ ದೂರ ಇಟ್ಟು ಅಧ್ಯಯನ ಮಾಡಬೇಕು ಎಂದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ವಿಜಯಪುರ ಎಂದರೆ ಗೋಲಗುಮ್ಮಟ ಎಂದು ಗುರುತಿಸುತ್ತಿದ್ದರು. ಆದರೆ ಈಗ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಜ್ಞಾನದ ಕ್ರಾಂತಿಯಿಂದ ವಿಜಯಪುರ ಎಂದರೆ ಸಿದ್ಧೇಶ್ವರ ಸ್ವಾಮೀಜಿಗಳು ಎನ್ನುವಂತೆ ಜ್ಞಾನದ ದೀವಿಗೆ ಹಚ್ಚಿದ್ದಾರೆ. ದೇಹಕ್ಕೆ ವಯಸ್ಸಾದರೂ, ಮನಸ್ಸನ್ನು ಹಗುರವಾಗಿ ಇಟ್ಟುಕೊಳ್ಳುವುದೇ ಯೋಗ ಜೀವನ ಎಂದು ನಮಗೆ ಸಿದ್ಧೇಶ್ವರ ಸ್ವಾಮೀಜಿಗಳು ತಿಳಿಸಿದ್ದಾರೆ ಅಂತಾ ಹೇಳಿದರು.

ಗದಗನ ಜಗದ್ಗುರು ಶ್ರೀ ಅಭಿನವ ಶಿವಾನಂದ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಭಗವಂತನ ಸ್ವರೂಪಿಯಾಗಿ ಮನುಕುಲದ ಉದ್ಧಾರಕ್ಕಾಗಿ ಮನುಷ್ಯ ಜನ್ಮ ತಾಳಿ ಬಂದಿದ್ದರು. ಅವರ ಶಕ್ತಿ ದೈವದತ್ತವಾಗಿ ಬಂದಿರುವಂತಹದ್ದು, ಅದು ಎಲ್ಲರಲ್ಲೂ ಬರಲು ಸಾಧ್ಯವಿಲ್ಲ. ಸಿದ್ಧೇಶ್ವರರು ವೈರಾಗ್ಯದ ಪ್ರತಿನಿಧಿ. ಅವರಲ್ಲಿ ವೈರಾಗ್ಯ ಬರಲು ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳು ಕಾರಣರು. ಸಂಪತ್ತು ಸಿಗುತ್ತದೆ. ಆದರೆ ಗುರು ಸಿಗುವುದಿಲ್ಲ ಗುರು ಸಿಕ್ಕಾಗ ನಾವು ಎಲ್ಲವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಜ್ಞಾನಯೋಗಾಶ್ರಮದ ಅಧ್ಯಕ್ಷಗುರುಗಳು ಮಾತನಾಡಿ, ಯೋಗ ಜೀವನ ನಮಗೆ ಎಷ್ಟು ಮುಖ್ಯ ಎನ್ನುವುದನ್ನು ಶ್ರೀ ಸಿದ್ಧೇಶ್ವರ ಅಪ್ಪಾವರು ತಿಳಿಸಿದ್ದಾರೆ. ಆ ಯೋಗ ಜೀವನದ ಮಹತ್ವವನ್ನು ಗುರುಗಳು ತಿಳಿಸಿಕೊಟ್ಟಿದ್ದಾರೆ. ಅವರೆಲ್ಲರ ಮೇಲು ಶ್ರೀ ಸಿದ್ಧೇಶ್ವರರ ಆಶೀರ್ವಾದ ಇರಲಿದೆ ಎಂದು ಹೇಳಿದರು. ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಮಾತನಾಡಿ, ಅಷ್ಟಾಂಗ ಯೋಗ ಜೀವನದ ಕುರಿತಾಗಿ ವಿವರಿಸಿ ಎಲ್ಲ ಭಕ್ತರಿಗೆ ಪ್ರಾಯೋಗಿಕವಾಗಿ ಯೋಗ ಹಾಗೂ ಧ್ಯಾನ ಮಾಡಿಸಿದರು. ಜ್ಞಾನೋಗಾಶ್ರಮದ ಶ್ರದ್ಧಾನಂದ ಸ್ವಾಮೀಜಿಗಳು ಯೋಗ ಜೀವನದ ಕುರಿತು ಕವನ ವಾಚನ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸ್ವಾಮೀಜಿಗಳು ಹಾಗೂ ಆಶ್ರಮದ ಭಕ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article