ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಸಾಕಷ್ಟು ಚರ್ಚೆಯನ್ನು ಹುಟ್ಟಿ ಹಾಕಿದ್ದು ಮಾತ್ರವಲ್ಲ ಕೋರ್ಟ್ ಅಂಗಳಕ್ಕೂ ಹೋಗಿ ಬಂದಿತು. ಎಲ್ಲ ವಿರೋಧದ ನಡುವೆ ಲೇಖಕಿ ಬಾನು ಮುಷ್ತಾಕ್ ಅವರು ನಾಡದೇವಿ ಚಾಮುಂಡೇಶ್ವರಿಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು, ಶಾಸಕರು, ಸಂಸದರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ದಸರಾಗೆ ಚಾಲನೆ ಕೊಟ್ಟು ಮಾತನಾಡಿದ ಬಾನು ಮುಷ್ತಾಕ್, ದೇವಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ ಎಂದು ಹೇಳುವ ಮೂಲಕ ತಮ್ಮ ಮಾತು ಪ್ರಾರಂಭಿಸಿದರು. ನಾವೆಲ್ಲ ಒಂದೇ ಗಗನ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ಹೊರತಳ್ಳುವುದಿಲ್ಲ. ಆದರೆ, ಮನುಷ್ಯರು ಮಾತ್ರ ಗಡಿಗಳನ್ನು ಸೃಷ್ಟಿಸುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಸಂಸ್ಕೃತಿ ಹೃದಯಗಳನ್ನು ಒಂದುಗೂಡಿಸುವುದು. ದ್ವೇಷಗಳನ್ನು ಬೆಳೆಸುವಂತದ್ದಲ್ಲ. ನನ್ನ ಧರ್ಮದ ಆಚರಣೆಗಳು ನನ್ನ ಮನೆಯ ಹೊಸ್ತಿಲ ಗಡಿಯನ್ನು ದಾಟಿಲ್ಲ. ಸೌಹರ್ದ, ಸಮಾನತೆಗೆ ದುಡಿದ ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಉಲ್ಲೇಖಿಸುವ ಮೂಲಕ ತಮ್ಮನ್ನು ವಿರೋಧಿಸಿದವರಿಗೆ ಉತ್ತರ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜಕಾರಣ ಮಾಡಲು ಬೇರೆ ಅವಕಾಶಗಳಿವೆ. ಆದರೆ, ಯಾರನ್ನೋ ಓಲೈಸಿ, ರಾಜಕಾರಣ ಮಾಡಲು ನಾಡಹಬ್ಬ ವಿರೋಧಿಸುವುದು ಸಂವಿಧಾನಕ್ಕೆ, ದೇಶಕ್ಕೆ ಮಾಡುವ ಅಪಚಾರ ಎಂದರು.