ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಕೆಲ ದಿನಗಳ ಹಿಂದೆ ಜಿಲ್ಲೆಯ ಹುಣಸೂರಿನಲ್ಲಿರುವ ಸ್ಕೈ ಗೋಲ್ಡ್ ಅಂಡ್ ಡೈಮೆಂಡ್ ಮಳಿಗೆಗೆ ನುಗ್ಗಿ ಪಿಸ್ತೂಲ್ ತೋರಿಸಿ 10 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಬಗ್ಗೆ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಬಿಹಾರ ಮೂಲದ ಕುಖ್ಯಾತ ಗ್ಯಾಂಗ್ ನಿಂದ ಈ ಕೃತ್ಯ ನಡೆದಿದ್ದು, ಇದರಲ್ಲಿ 10ಕ್ಕೂ ಹೆಚ್ಚು ಆರೋಪಿಗಳಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಕೃತ್ಯದ ಸಂದರ್ಭದಲ್ಲಿ ಆರೋಪಿಗಳು ಮೊಬೈಲ್ ಬಳಸಿರಲಿಲ್ಲ. ಸಿಸಿಟಿವಿ ಪರಿಶೀಲನೆಯಲ್ಲಿ ಮೂವರ ಮುಖ ತಿಳಿದು ಬಂದಿದೆ. ಅಂತ್ರಜ್ಞಾನದ ಮೂಲಕ ನೋಡಿದಾಗ ಮುಖಚಹರೆ ಪತ್ತೆ ಮಾಡಿದಾಗ ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಅಲ್ಲಿನ ಪೊಲೀಸರನ್ನು ಸಂರ್ಪಕಿಸಿದಾಗ ಆರೋಪಿಗಳ ಗುರುತು ಪತ್ತೆಯಾಗಿದೆ. ಇದು ನಟೋರಿಯಸ್ ಗ್ಯಾಂಗ್ ಎಂದು ತಿಳಿದು ಬಂದಿದೆ. ಪತ್ತೆಯಾಗಿರುವ ಪಂಕಜ್ 27 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ರಿಷಕೇಶ್ ಅಲಿಯಾಸ್ ಚೋಟು 4 ಕೊಲೆ ಪ್ರಕರಣ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಹುಣಸೂರಿನ ಪ್ರಕರಣದಲ್ಲಿ ಪಂಕಜ್ ಹುಡುಗರನ್ನು ಒಂದುಗೂಡಿಸಿ ಲಾಜಿಸ್ಟಿಕ್ ಬೆಂಬಲ ನೀಡಿರುವುದು ತಿಳಿದು ಬಂದಿದೆ.
ಬಿಹಾರಕ್ಕೆ ಸಿಪಿಐ ಕಶ್ಯಪ್, ಡಿ.ಎಂ ಪುನೀತ್, ಪಿಎಸ್ಐ ಅಜಯ್ ಕುಮಾರ್ ನೇತೃತ್ವದ ತಂಡವನ್ನು ಕಳಿಸಿಕೊಡಲಾಗಿತ್ತು. ಅಲ್ಲಿನ ಪೊಲೀಸರ ನೆರವಿನೊಂದಿಗೆ ದರ್ಬಾಂಗ್ ಜಿಲ್ಲೆಯಲ್ಲಿ ದೆಹಲಿ ಮೂಲದ ರಿಷಿಕೇಶ್ ಕುಮಾರ್ ಸಿಂಗ್, ಬಾಗಲ್ ಪುರ್ ಜಿಲ್ಲೆಯ ಪಂಕಜ್ ನನ್ನು ವಶಕ್ಕೆ ಪಡೆಯಲಾಗಿದೆ. ಜೈಲಿನಲ್ಲಿ ಇದ್ದಾಗ ಇತರೆ ಆರೋಪಿಗಳ ಸಂಪರ್ಕ ಬೆಳೆದಿದೆ. ಹೊರಗೆ ಬಂದ ಬಳಿಕ ಜೊತೆಗೆ ಕೃತ್ಯ ನಡೆಸುತ್ತಿದ್ದರು. 8 ಕೆಜಿ ಚಿನ್ನ ಎಲ್ಲಿ ಹೋಗಿದೆ ಅನ್ನೋದು ತಿಳಿಯುವುದರ ಜೊತೆಗೆ ಉಳಿದ ಆರೋಪಿಗಳನ್ನು ಪತ್ತೆ ಹಚ್ಚಬೇಕಿದೆ. ಸಧ್ಯ 12.5 ಗ್ರಾಂ ಚಿನ್ನಾಭರಣ, 92 ಸಾವಿರ ರೂಪಾಯಿ, ಸ್ಕೈ ಗೋಲ್ಡ್ ಚಿಹ್ನೆ ಇರುವ ಒಂದು ಬಾಕ್ಸ್, ಒಂದು ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.




