ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಮದುವೆ ಬ್ರೋಕರ್ ವೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಗುರುವಾರ ರಾತ್ರಿ ವಳಚ್ಚಿಲ್ ನಲ್ಲಿ ನಡೆದಿದೆ. ವಾಮಂಜೂರಿನ ಸುಲೇಮಾನ್(50) ಕೊಲೆಯಾದ ವ್ಯಕ್ತಿ. ಇವರ ಇಬ್ಬರ ಮಕ್ಕಳಾದ ರಿಯಾಬ್ ಹಾಗೂ ಶಿಯಾಬ್ ಗಾಯಗೊಂಡಿದ್ದಾರೆ. ಮುಸ್ತಾಫಾ ಕೊಲೆ ಆರೋಪಿಯಾಗಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನಲೆ: ಕಳೆದ 8 ತಿಂಗಳ ಹಿಂದೆಯಷ್ಟೇ ಷಾಹಿನಾಜ್ ಅನ್ನೋ ಯುವತಿ ಜೊತೆಗೆ ಮುಸ್ತಾಫಾ ಮದುವೆಯಾಗಿದ್ದಾನೆ. ಕೊಲೆಯಾದ ಬ್ರೋಕರ್ ಸುಲೇಮಾನ್ ಯುವತಿಯನ್ನು ತೋರಿಸಿ ಮದುವೆ ಮಾಡಿಸಿದ್ದರು. ಈ ಜೋಡಿ ನಡುವೆ ಮನಂಸ್ತಾಪವಾಗಿದೆ. ಇದರಿಂದಾಗಿ ಎರಡು ತಿಂಗಳ ಹಿಂದೆ ತವರು ಮನೆಗೆ ಹೋದ ಪತ್ನಿ ವಾಪಸ್ ಬಂದಿರಲಿಲ್ಲ. ಸಿಟ್ಟಿಗೆದ್ದ ಹುಡುಗ ಮದುವೆ ಬ್ರೋಕರ್ ಸುಲೇಮಾನ್ ಗೆ ಫೋನ್ ಮಾಡಿ ಬೈದಿದ್ದಾನೆ. ತನ್ನ ಇಬ್ಬರು ಮಕ್ಕಳೊಂದಿಗೆ ಸುಲೇಮಾನ್ ಹುಡುಗನ ಮನೆಗೆ ಮಾತುಕತೆಗೆ ಬಂದಿದ್ದಾನೆ. ಈ ವೇಳೆ ಗಲಾಟೆಯಾಗಿದೆ. ಮನೆಯಿಂದ ಹೋಗುವಂತೆ ಅವರನ್ನು ಮುಸ್ತಾಫಾ ಹೇಳಿದ್ದ. ಆದರೆ, ಏಕಾಕಿ ಚಾಕು ತೆಗೆದುಕೊಂಡು ಮೂವರ ಮೇಲೆ ಹಲ್ಲೆ ಮಾಡಿದ್ದಾನೆ.
ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಲೇಮಾನ್ ಗೆ ಕುತ್ತಿಗೆಗೆ, ಶಿಯಾಬ್ ಗೆ ಎದೆಯ ಎಡಭಾಗಕ್ಕೆ, ರಿಯಾಬ್ ಗೆ ಬಲ ತೋಳಿಗೆ ಇರಿದಿದ್ದಾನೆ. ಸುಲೇಮಾನ್ ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಗಾಯಗೊಂಡಿರುವ ಸಹೋದರರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.