ಪ್ರಜಾಸ್ತ್ರ ಸುದ್ದಿ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ ಬಿಡುತ್ತಿದ್ದಾರೆ. ನಾನು ಮತ್ತು ಶಿವಕುಮಾರ್ ಇಬ್ಬರೂ ಒಟ್ಟಾಗಿ, ಗಟ್ಟಿಯಾಗಿದ್ದೀವಿ. ನಮ್ಮ ಸರ್ಕಾರವೂ ಐದು ವರ್ಷ ಗ್ಯಾರಂಟಿಯಾಗಿ ಗಟ್ಟಿಯಾಗಿ ಇರುತ್ತದೆ. 2028 ರಲ್ಲೂ ಗೆದ್ದು ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾವೇರಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನೀರಾವರಿಗೆ ನಮ್ಮ ಸರ್ಕಾರ 25 ಸಾವಿರ ಕೋಟಿ ಕೊಟ್ಟಿದೆ. ಬೇರೆ ಯಾವುದಾದರೂ ಸರ್ಕಾರ ಈ ಮಟ್ಟದ ಅನುದಾನ ಕೊಟ್ಟಿತ್ತಾ? ಅಭಿವೃದ್ಧಿಗೆ ಹಣ ಇಲ್ಲ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುತ್ತಿರುವ ಬಿಜೆಪಿಯವರು ನಾಡಿನ ಜನರಿಗೆ ಉತ್ತರಿಸಬೇಕು. ದಿವಾಳಿ ಆಗಿದ್ದರೆ 25 ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬರಲು ಸಾಧ್ಯ? ಕೃಷಿ ಪ್ರಗತಿಗಾಗಿ ವರ್ಷಕ್ಕೆ 19,000 ಸಾವಿರ ಕೋಟಿ ಹಣವನ್ನು ಪಂಪ್ ಸೆಟ್ ಸಬ್ಸಿಡಿ ರೂಪದಲ್ಲಿ ರೈತರಿಗೆ ಕೊಟ್ಟಿದ್ದೇವೆ. 92 ವರ್ಷಗಳ ಬಳಿಕ ಡ್ಯಾಂ ಜೂನ್ ತಿಂಗಳಲ್ಲೇ ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಕೆಆರ್ಎಸ್ ನಲ್ಲಿ ಸ್ಮಾರಕ ನಿರ್ಮಿಸಲಾಗುವುದು.
ಕೃಷ್ಣರಾಜಸಾಗರದ ಒಟ್ಟು 124 ಅಡಿ ಸಾಮರ್ಥ್ಯದಲ್ಲಿ 120.90 ಅಡಿ ಭರ್ತಿ ಆಗಿದೆ. ಅಣೆಕಟ್ಟೆಗೆ 49 ಟಿಎಂಸಿ ನೀರಿನ ಸಾಮರ್ಥ್ಯವಿದೆ. 193 ವರ್ಷಗಳಲ್ಲಿ 76 ಬಾರಿ ಭರ್ತಿಯಾಗಿದೆ. 2023-24 ರಲ್ಲಿ ಬರಗಾಲವಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯ ಅವರ ಕಾಲುಗುಣ ಚೆನ್ನಾಗಿಲ್ಲ, ಕಾಂಗ್ರೆಸ್ ಸರ್ಕಾರದ ಕಾಲುಗುಣ ಸರಿಯಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಈಗ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿ ಆಗುತ್ತಿದೆ. ವಿರೋಧ ಪಕ್ಷಗಳ ಮೂಡಾತ್ಮರು ಈಗ ಏನು ಹೇಳ್ತಾರೆ? ನಾವು ಈ ಬಾರಿ ಕಾವೇರಿ ಅಭಿವೃದ್ಧಿ ನಿಗಮಕ್ಕೆ 3000 ಕೋಟಿ ಹಣ ಕೊಟ್ಟಿದ್ದೇವೆ. ಈಗ ಟೀಕಿಸುತ್ತಿರುವವರು ಅಧಿಕಾರದಲ್ಲಿದ್ದಾಗ ಕಾವೇರಿ ನಿಗಮಕ್ಕೆ ಹಣ ಕೊಡಲಿಲ್ಲ ಯಾಕೆ?
ತಾಯಿ ಕಾವೇರಿಗೆ ಪೂಜೆ ಮಾಡಿ ನಾಡಿನಲ್ಲಿ ಮಳೆ, ಬೆಳೆ ಹೀಗೇ ಚನ್ನಾಗಿ ಆಗಲಿ ಎಂದು ಪ್ರಾರ್ಥಿಸಿದ್ದೇನೆ. ನಾವು ಅಧಿಕಾರದಲ್ಲಿದ್ದಾಗ ಯಾವಾಗಲಾದರೂ ರೈತರಿಗೆ ಬೀಜ, ಗೊಬ್ಬರಕ್ಕೆ ತೊಂದರೆ ಮಾಡಿದ್ದೇವಾ? ಬೀಜ ಕೇಳಿದವರಿಗೆ ಗೋಲಿಬಾರ್ ಮಾಡಿದ್ದೇವಾ? ಕಾವೇರಿ ತಾಯಿ, ಚಾಮುಂಡೇಶ್ವರಿ ತಾಯಿಯ ಕೃಪಾಕಟಾಕ್ಷದಿಂದ ರಾಜ್ಯ ಸುಭಿಕ್ಷವಾಗಿದೆ. ಎಲ್ಲಾ ಜಲಾಶಯಗಳೂ ತುಂಬಿವೆ. ಎಲ್ಲಾ ನಾಲೆಗಳಿಗೂ ತಕ್ಷಣದಿಂದ ನೀರು ಹರಿಸಲು ಆದೇಶ ನೀಡುತ್ತಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.