ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಾನು ವಿಷ್ಣುವಿನ(Lord Vishnu) ಮಗ. ಈ ಸತ್ಯದ ಸಮಾಜದಲ್ಲಿ ಇರುವುದಿಲ್ಲವೆಂದು ಹೇಳಿ ಬಿ.ಕಾಂ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋದ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಬರುವ ನಿವಾಸಿಯಾದ ಮೋಹಿತ್ ಋಷಿ ಎನ್ನುವ ಬಿ.ಕಾಂ ವಿದ್ಯಾರ್ಥಿ ಕಳೆದ ಜನವರಿ 16ರಂದು ಮನೆ ಬಿಟ್ಟು ಹೋಗಿದ್ದಾನೆ. ನಗರದ ಬಿಇಎಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಕುರಿತು ಪೋಷಕರು ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಂದು ಎಂದಿನಂತೆ ತಾಯಿ ಮಗನನ್ನು ಎಬ್ಬಿಸಲು ಹೋದಾಗ ಮಗ ರೂಮಿನಲ್ಲಿ ಇರಲಿಲ್ಲ. ಮೊಬೈಲ್ ಸಹ ಬಿಟ್ಟು ಹೋಗಿದ್ದಾನೆ. ಪುಸ್ತಕವೊಂದರಲ್ಲಿ ಇಟ್ಟಿದ್ದ ಹಾಳೆಯಲ್ಲಿ, ನಾನು ವಿಷ್ಣುವಿನ ಮಗ. ನನಗೆ ಏನೂ ಆಗುವುದಿಲ್ಲ. ಈ ಅಧರ್ಮದ ಜಗತ್ತಿನಲ್ಲಿ ಇರುವುದಿಲ್ಲ. ದಯವಿಟ್ಟು ಯಾರು ನನ್ನನ್ನು ಹುಡುಕಬೇಡಿ ಎಂದು ಬರೆದಿದ್ದಾನೆ ಎಂದು ತಿಳಿದು ಬಂದಿದೆ. ಇದರ ಆಧಾರದ ಮೇಲೆ ಪೊಲೀಸರು ವಿದ್ಯಾರ್ಥಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋಗಿರಬಹುದು ಎಂದು ಅಂದಾಜಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.




